ನವದೆಹಲಿ: ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿ ಆಗಸ್ಟ್ 13ರಿಂದ 15ರ ವರೆಗೆ ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸಲು ಜನರಿಗೆ ಉತ್ತೇಜನ ನೀಡುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಒತ್ತಾಯಿಸಿದೆ.
'ಜನರ ಹೃದಯದಲ್ಲಿ ದೇಶಪ್ರೇಮ ಮೂಡಿಸಲು ಮತ್ತು ದೇಶ ಕಟ್ಟಲು ದಣಿವರಿಯದೆ ದುಡಿದವರನ್ನು ಸ್ಮರಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಜನರನ್ನು ಉತ್ತೇಜಿಸಬೇಕು' ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಪತ್ರ ಬರೆದು ಮನವಿ ಮಾಡಿದೆ.