ಪ್ರಯಾಗರಾಜ್: ಉತ್ತರಪ್ರದೇಶ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವ ಘಟನೆಗೆ ಸಂಬಂಧಿಸಿದಂತೆ ಈ ಪ್ರಕರಣ ಇನ್ನೂ ವಾರಣಾಸಿ ಹೈಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಅದೇ ಇನ್ನೊಂದೆಡೆ, ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗ ಮತ್ತು ಆ ಸ್ಥಳವನ್ನು ಯಥಾವತ್ತಾಗಿ ಕಾಪಾಡಲು ಸುಪ್ರೀಂಕೋರ್ಟ್ ಸೂಚಿಸಿದೆ.
ಈ ನಡುವೆಯೇ ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ, ಇಲ್ಲಿಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೋಗಿದ್ದರು ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳಾದ ರಾಜಶ್ರೀ ಚೌಧರಿ. ಆದರೆ ಅವರನ್ನು ನಡುವೆಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೆಹಲಿಯಿಂದ ರೈಲು ಮುಖಾಂತರ ವಾರಾಣಸಿಗೆ ಹೊರಟಿದ್ದ ಹಿಂದೂ ಮಹಸಭಾ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ರಾಜಶ್ರೀ ಚೌಧರಿ ಅವರನ್ನು ಸಂಗಮ್ ನಗರದಲ್ಲಿಯೇ ತಡೆಯಲಾಗಿದೆ. ಮಸೀದಿ ಆವರಣದಲ್ಲಿ ಸಿಕ್ಕಿರುವ ವಿವಾದಿತ ಶಿವಲಿಂಗಕ್ಕೆ ಪೂಜೆ, ಜಲಾಭಿಷೇಕ ಮಾಡಲು ತಾವು ಹೋಗುತ್ತಿರುವುದಾಗಿ ಹೇಳಿದರೂ ಪೊಲೀಸರು ರಾಜಶ್ರೀ ಅವರಿಗೆ ಅವಕಾಶವನ್ನು ನೀಡಲಿಲ್ಲ. ಸದ್ಯ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಇದಕ್ಕೆ ಕಾರಣ, ಮಸೀದಿಗೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ, ಶಿವಲಿಂಗಕ್ಕೆ ಪೂಜಾ ಕೈಂಕರ್ಯಗಳನ್ನು ಸದ್ಯಕ್ಕೆ ನಡೆಸದಂತೆ ಸೂಚಿಸಲಾಗಿದೆ. ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿಯುಂಟು ಮಾಡಬಾರದು ಎಂದು ಇದಾಗಲೇ ಸುಪ್ರೀಂಕೋರ್ಟ್ ಹೇಳಿದ್ದು. ಪೂಜೆ ಸಲ್ಲಿಸಿದರೆ ಏನಾದರೂ ಗಲಾಟೆಯಾಗುವ ಸಾಧ್ಯತೆ ಇರುವ ಕಾರಣ ರಾಜಶ್ರೀ ಅವರನ್ನು ತಡೆಯಲಾಗಿದೆ ಎನ್ನಲಾಗಿದೆ.
ಪ್ರಯಾಗ್ರಾಜ್ ಜಂಕ್ಷನ್ ಬಳಿ ಅವರನ್ನು ರೈಲಿನಿಂದ ಕೆಳಗಿಳಿಸಿ ಪೊಲೀಸ್ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ, ಈ ಮೊದಲೇ ಅವರು ತಾವು ಇಲ್ಲಿಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವುದಾಗಿ ಘೋಷಿಸಿದ್ದರು. ಆಗಲೇ ಪೊಲೀಸ್ ಪಡೆ ಎಚ್ಚೆತ್ತುಕೊಂಡಿದೆ.