ತಿರುವನಂತಪುರ: ಫೇಸ್‌ಬುಕ್‌ನಲ್ಲಿ ಕಾಶ್ಮೀರದ ಕುರಿತು ವಿವಾದಾತ್ಮಕ ಹೇಳಿಕೆ ಸಂಬಂಧಿಸಿದಂತೆ ಕೇರಳದ ಎಲ್‌ಡಿಎಫ್ ಶಾಸಕ, ಮಾಜಿ ಸಚಿವ ಕೆ.ಟಿ. ಜಲೀಲ್, ಶನಿವಾರ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಟೀಕಾಕಾರರನ್ನು ದೂಷಿಸಿದ್ದಾರೆ.
ವಿವಾದಗಳಿಗೆ ಒಂದೇ ಸಾಲಿನ ಉತ್ತರ ನೀಡಿರುವ ಜಲೀಲ್, ತಮ್ಮ ಹೇಳಿಕೆ ಅರ್ಥ ಮಾಡಿಕೊಳ್ಳಲು ವಿಫಲರಾದವರ ಬಗ್ಗೆ ಅನುಕಂಪವಿದೆ ಎಂದು ಹೇಳಿದ್ದಾರೆ.
ಆದರೂ 'ಭಾರತ ಅಧೀನ ಜಮ್ಮು ಮತ್ತು ಕಾಶ್ಮೀರ' ಎಂಬ ತಮ್ಮ ಉಲ್ಲೇಖದ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಲಿಲ್ಲ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಜಲೀಲ್, 'ಆಜಾದ್ ಕಾಶ್ಮೀರ' ಅನ್ನು ಉದ್ಧರಣ ಚಿಹ್ನೆಯಲ್ಲಿ ಬರೆದಾಗ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದವರ ಬಗ್ಗೆ ನನಗೆ ಅನುಕಂಪವಿದೆ ಎಂದು ಮಲಯಾಳಂ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಅಧೀನ ಜಮ್ಮು ಮತ್ತು ಕಾಶ್ಮೀರ (ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದು ಕೆ.ಟಿ. ಜಲೀಲ್ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಈ ಸಂಬಂಧ ಜಲೀಲ್ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಕೇರಳದ ಬಿಜೆಪಿ ನಾಯಕರು ಜಲೀಲ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.