ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಚುನಾವಣೆಗಳಲ್ಲಿ ವಲಸಿಗರಿಗೆ ಮತದಾನ ಮಾಡುವ ಹಕ್ಕು ನೀಡುವುದನ್ನು ವಿರೋಧ ಪಕ್ಷಗಳು ವಿರೋಧಿಸಲಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.
ನಗರದ ಗುಪ್ಕಾರ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ನಡೆದ ಸರ್ವ ಪಕ್ಷಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಫಾರೂಕ್, 'ಹೊಸ ಮತದಾರರ ಸಂಖ್ಯೆ 25 ಲಕ್ಷ ಇರಲಿದೆ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಅದು 50 ಲಕ್ಷ, 60 ಲಕ್ಷವೂ ಆಗಬಹುದು ಅಥವಾ ಒಂದು ಕೋಟಿ ಬೇಕಾದರೂ ಆಗಬಹುದು. ಆ ವಿಚಾರದಲ್ಲಿ ಸ್ಪಷ್ಟತೆಯೇ ಇಲ್ಲ' ಎಂದು ದೂರಿದ್ದಾರೆ.
ಮುಂದುವರಿದು, 'ಜಮ್ಮು ಮತ್ತು ಕಾಶ್ಮೀರದಲ್ಲಿನ ವಲಸಿಗರಿಗೆ ಮತದಾನದ ಹಕ್ಕು ನೀಡುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರವು ತನ್ನ ಅಸ್ಮಿತೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳಲಿದೆ' ಎಂದು ಕಿಡಿಕಾರಿರುವ ಅವರು, 'ಹೀಗಾಗಿ ಈ ನಿರ್ಧಾರವನ್ನು ನಾವೆಲ್ಲರೂ ಒಟ್ಟಾಗಿ ವಿರೋಧಿಸಲಿದ್ದೇವೆ' ಎಂದು ತಿಳಿಸಿದ್ದಾರೆ.
'ಮುಖ್ಯವಾದ ಮತ್ತೊಂದು ವಿಚಾರವೆಂದರೆ, ಇಲ್ಲಿನ ಹೆಚ್ಚಿನ ರಾಜಕೀಯ ಪಕ್ಷಗಳಿಗೆ ಭದ್ರತೆ ಇಲ್ಲ. ಹೀಗಿರುವಾಗ, ವಲಸೆ ಕಾರ್ಮಿಕರನ್ನು ರಕ್ಷಿಸಲು ಸರ್ಕಾರ ಹೇಗೆ ಯೋಜನೆ ರೂಪಿಸಲಿದೆ? ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು' ಎಂದು ಎಚ್ಚರಿಸಿದ್ದಾರೆ.
ಫಾರೂಕ್ ಅವರ ಪುತ್ರ ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರ ಕಾಂಗ್ರೆಸ್ ನಾಯಕ ವಿಕಾರ್ ರಸೂಲ್ ವಾನಿ ಸೇರಿದಂತೆ ಬಿಜೆಪಿಯೇತರ ಹಲವು ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.