HEALTH TIPS

ಹುಲಿ ಕಾರಿಡಾರ್‌ನಲ್ಲಿ ಹೆದ್ದಾರಿ ವಿಸ್ತರಣೆ: ವನ್ಯಜೀವಿ ಮಂಡಳಿಯ ಅನುಮೋದನೆ ಕಡ್ಡಾಯ

 

           ನವದೆಹಲಿ: ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಬೆಳಗಾವಿ- ಗೋವಾ ನಡುವೆ
ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 748 ಎಎ) ಮೇಲ್ದರ್ಜೆಗೆ ಏರಿಸುವ ಕಾಮಗಾರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಕಡ್ಡಾಯ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿರ್ದೇಶಿಸಿದೆ.

               ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ (ಈ ಯೋಜನೆಯ ಉಸ್ತುವಾರಿ ವಹಿಸಿರುವ ಯೋಜನಾ ನಿರ್ದೇಶಕರ ಕಚೇರಿ ಧಾರವಾಡದಲ್ಲಿದೆ) ಸೋಮವಾರ ಪತ್ರ ಬರೆದಿರುವ ಎನ್‌ಟಿಸಿಎ, 'ಈ ರಾಷ್ಟ್ರೀಯ ಹೆದ್ದಾರಿಯು ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ ಸಂರಕ್ಷಿತ ಪ್ರದೇಶ (ಕ್ಯಾಸಲ್‌ರಾಕ್‌), ಭೀಮಘಡ ವನ್ಯಜೀವಿ ಧಾಮ, ಮೊಲ್ಲೆಮ್‌ ರಾಷ್ಟ್ರೀಯ ಉದ್ಯಾನ, ಸಹ್ಯಾದಿ ಹುಲಿ ಸಂರಕ್ಷಿತ ಪ್ರದೇಶ, ರಾಧಾನಗರಿ ವನ್ಯಜೀವಿ ಧಾಮ, ತಿಲ್ಲಾರಿ ಅರಣ್ಯ ‍ಪ್ರದೇಶ, ಮೇದೈ ವನ್ಯಜೀವಿಧಾಮ ಹಾಗೂ ಹುಲಿ ಕಾರಿಡಾರ್‌ನಲ್ಲಿ ಹಾದು ಹೋಗುತ್ತದೆ. ಹೀಗಾಗಿ, ಕಾಮಗಾರಿ ಆರಂಭಕ್ಕೆ ಮುನ್ನ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆಯಬೇಕು. ಇದಕ್ಕಾಗಿ ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಪರಿವೇಶ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು' ಎಂದು ಸೂಚಿಸಿದೆ.

                ₹ 220 ಕೋಟಿ ವೆಚ್ಚದಲ್ಲಿ 69 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಕ್ರಿಯೆ ಆರಂಭಿಸಿತ್ತು. ಗುರುಗ್ರಾಮದ ಎನ್‌ಎಸ್‌ಸಿ ಪ್ರಾಜೆಕ್ಟ್‌ ಸಂಸ್ಥೆಗೆ ಕಾಮಗಾರಿಯ ಗುತ್ತಿಗೆಯನ್ನು ಈ ವರ್ಷದ ಮಾರ್ಚ್‌ನಲ್ಲಿ ವಹಿಸಲಾಗಿತ್ತು. ಹೆದ್ದಾರಿಯು ವನ್ಯಜೀವಿ ಧಾಮದೊಳಗೆ ಹಾದು ಹೋಗುತ್ತಿದ್ದು, ಪರಿಸರ ಅನುಮೋದನೆ ಪಡೆಯದೆ
ಕಾಮಗಾರಿ ನಡೆಸಲಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಕರ್ನಾಟಕದ ವನ್ಯಜೀವಿ ಕಾರ್ಯಕರ್ತ ಗಿರಿಧರ್‌ ಕುಲಕರ್ಣಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಉತ್ತರ ನೀಡಿದ್ದ ಪ್ರಾಧಿಕಾರ, 'ಈ ಯೋಜನೆಗೆ ಪರಿಸರ ಅನುಮೋದನೆ ಪಡೆಯಬೇಕಿಲ್ಲ. 4.46 ಹೆಕ್ಟೇರ್‌ನಷ್ಟು ಅರಣ್ಯೇತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ' ಎಂದು ಪ್ರತಿಕ್ರಿಯಿಸಿತ್ತು.

                ಎನ್‌ಟಿಸಿಎಗೆ ದೂರು: ಬಳಿಕ ವನ್ಯಜೀವಿ ಕಾರ್ಯ ಕರ್ತ ಗಿರಿಧರ್ ಕುಲಕರ್ಣಿ ಅವರು ಎನ್‌ಟಿಸಿಎ, ಕರ್ನಾಟಕ ಸರ್ಕಾರದ ಅರಣ್ಯ ಪಡೆಯ ಮುಖ್ಯಸ್ಥರು (ಪಿಸಿಸಿಎಫ್‌), ಪಿಸಿಸಿಎಫ್‌ (ವನ್ಯಜೀವಿ) ಅವರಿಗೆ ದೂರು ಸಲ್ಲಿಸಿದ್ದರು.

               'ಈ ಹೆದ್ದಾರಿ ಬೆಳಗಾವಿ ಜಿಲ್ಲೆಯ ಪಿರನವಾಡಿ, ನಾವಗೆ, ಕಿನಯೆ, ಕುಸುಮಲ್ಲಿ, ಜಾಂಬೋಟಿ, ಕಲ್ಮನಿ, ಕಣಕುಂಬಿ ಮೂಲಕ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಪರಿಸರ ಅನುಮೋದನೆ ಅಗತ್ಯ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಕಾಮಗಾರಿಯ ಸರ್ವೆ ಆರಂಭಿಸಿದೆ. ಈ ಹೆದ್ದಾರಿ ಹಾದುಹೋಗುವ ಪ್ರದೇಶಗಳಲ್ಲಿ ಹುಲಿಗಳು ಇವೆ ಎಂಬುದು ಹುಲಿಗಳ
ಸಮೀಕ್ಷೆಯಲ್ಲಿ (2018ರ ಸಮೀಕ್ಷೆ) ಗೊತ್ತಾಗಿದೆ. ಅಲ್ಲದೆ, ಆನೆ, ಚಿರತೆ, ಹಾರ್ನ್‌ಬಿಲ್‌ ಸೇರಿ ಅನೇಕ ಪ್ರಭೇದಗಳಿವೆ. ಅಳಿವಿನಂಚಿನ ಕೆಲ ಪ್ರಾಣಿಗಳೂ ಇವೆ. ಹೆದ್ದಾರಿ ನಿರ್ಮಾಣದಿಂದ ಇವುಗಳಿಗೆ ತೊಂದರೆ ಆಗಲಿದೆ' ಎಂದು ಗಿರಿಧರ್‌ ದೂರಿನಲ್ಲಿ ತಿಳಿಸಿದ್ದರು.

               'ಇದೇ ಭಾಗದಲ್ಲಿ ಕಳಸಾ- ಬಂಡೂರಿ ಯೋಜನೆಗಾಗಿ 49 ಹೆಕ್ಟೇರ್‌ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ನೀರಾವರಿ ನಿಗಮವು ಕರ್ನಾಟಕ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಒಂದು ವೇಳೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾದರೆ ವನ್ಯಜೀವಿ ಧಾಮಗಳು ಮತ್ತಷ್ಟು ಛಿದ್ರ ಆಗಲಿವೆ' ಎಂದು ಅವರು ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries