ನವದೆಹಲಿ: ಮದ್ಯಪಾನ, ಧೂಮಪಾನ ಪ್ರಿಯರಿಗೆ ಇದು ಆಘಾತಕಾರಿ ಸುದ್ದಿ. ಅಧ್ಯಯನವೊಂದರಲ್ಲಿ ಕಂಡುಬಂದಿರುವ ಈ ಅಂಶಗಳು ಮದ್ಯ ಹಾಗೂ ಬೀಡಿ-ಸಿಗರೇಟ್ ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ಯೋಚಿಸುವಂತೆ ಮಾಡಿದರೂ ಅಚ್ಚರಿ ಏನಲ್ಲ. ಇಂಥದ್ದೊಂದು ಆತಂಕಕಾರಿ ಅಂಶ ಈ ಜಾಗತಿಕ ಅಧ್ಯಯನಲ್ಲಿ ಕಂಡುಬಂದಿದೆ.
ಯುನಿವರ್ಸಿಟಿ ಆಫ್ ವಾಷಿಂಗ್ಟನ್ಸ್ ಸ್ಕೂಲ್ ಆಫ್ ಮೆಡಿಸಿನ್ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆಯಂಡ್ ಇವ್ಯಾಲ್ಯುವೇಷನ್ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಅವರು ಮಂಡಿಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಅಂಶಗಳು ಕಂಡುಬಂದಿದ್ದು, ಇದನ್ನು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಪ್ರಕಟಿಸಿದೆ. ಈ ಅಧ್ಯಯನದಲ್ಲಿನ ಅಂಶಗಳು ಮದ್ಯ ಹಾಗೂ ಧೂಮಪಾನಪ್ರಿಯರಿಗೆ ಎಚ್ಚರಿಕೆ ಗಂಟೆಯಂತಿದೆ.
ಲ್ಯಾನ್ಸೆಟ್ನಲ್ಲಿ ಪ್ರಕಟಗೊಂಡಿರುವ 'ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್, ಇಂಜುರೀಸ್ ಆಯಂಡ್ ರಿಸ್ಕ್ ಫ್ಯಾಕ್ಟರ್ಸ್ (ಜಿಬಿಡಿ) ರಿಪೋರ್ಟ್-2019' ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿನ ಅಂಶಗಳು ಒಂದಷ್ಟು ಮಾಹಿತಿಯನ್ನು ಹೊರಹಾಕಿವೆ. ಇದರ ಪ್ರಕಾರ 2019ರಲ್ಲಿ ಭಾರತದಲ್ಲಿನ ಕ್ಯಾನ್ಸರ್ ರೋಗಿಗಳಲ್ಲಿ ಸತ್ತವರ ಪೈಕಿ ಶೇ. 37 ರೋಗಿಗಳ ಸಾವಿಗೆ ಧೂಮಪಾನ, ಮದ್ಯಪಾನ ಮತ್ತು ಹೈ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಕಾರಣ ಎಂಬುದು ಕಂಡುಬಂದಿದೆ. ಜಾಗತಿಕವಾಗಿ ಹೇಳುವುದಾದರೆ, ಕ್ಯಾನ್ಸರ್ನಿಂದ ಸತ್ತವರ ಪೈಕಿ ಶೇ. 44.4 ಸಾವಿಗೆ ಈ ರಿಸ್ಕ್ ಫ್ಯಾಕ್ಟರ್ಗಳೇ ಕಾರಣ ಎಂದು ತಿಳಿದುಬಂದಿದೆ.
ಇದೇ ಅಧ್ಯಯನದ ಪ್ರಕಾರ, 2019ರಲ್ಲಿ ಜಗತ್ತಿನಲ್ಲಿ ಸಂಭವಿಸಿದ ಪುರುಷ ಕ್ಯಾನ್ಸರ್ ರೋಗಿಗಳ ಸಾವಿನಲ್ಲಿ ಶೇ. 50.6ರಷ್ಟು ಸಾವು ಹಾಗೂ ಮಹಿಳಾ ಕ್ಯಾನ್ಸರ್ ರೋಗಿಗಳಲ್ಲಿ ಶೇ. 36.3 ಸಾವು ಈ ರಿಸ್ಕ್ ಫ್ಯಾಕ್ಟರ್ಗಳಿಂದ ಸಂಭವಿಸಿದೆ ಎಂಬುದು ಕಂಡುಬಂದಿದೆ. ಅಂದರೆ ಈ ಅವಧಿಯಲ್ಲಿನ ಕ್ಯಾನ್ಸರ್ ರೋಗಿಗಳಲ್ಲಿ 2.88 ದಶಲಕ್ಷ ಪುರುಷರು ಮತ್ತು 1.58 ದಶಲಕ್ಷ ಮಹಿಳೆಯರ ಸಾವು ಧೂಮಪಾನ, ಮದ್ಯಪಾನ, ಅತಿಯಾದ ಬಿಎಂಐ ಮುಂತಾದ ರಿಸ್ಕ್ ಫ್ಯಾಕ್ಟರ್ಗಳಿಂದ ಸಂಭವಿಸಿದೆ ಎಂದು ಈ ಅಧ್ಯಯನ ಹೇಳಿದೆ.
ಈ ಅಧ್ಯಯನವು 23 ವಿವಿಧ ಕ್ಯಾನ್ಸರ್ಗಳಲ್ಲಿ ಸಾವು ಅಥವಾ ಆರೋಗ್ಯ ಅತಿಯಾಗಿ ಹದಗೆಡುವಂಥದ್ದಕ್ಕೆ ಕಾರಣವಾಗುವ 34 ವಿಧದ ರಿಸ್ಕ್ ಫ್ಯಾಕ್ಟರ್ಗಳ ವಿಶ್ಲೇಷಣೆ ನಡೆಸಿದೆ. ಅವುಗಳ ಪೈಕಿ ಧೂಮಪಾನ, ಮದ್ಯಪಾನ ಮತ್ತು ಅತಿಯಾದ ಬಾಡಿ ಮಾಸ್ ಇಂಡೆಕ್ಸ್ ಪುರುಷ ಹಾಗೂ ಮಹಿಳೆಯರಿಬ್ಬರಲ್ಲೂ ಸಾವು ಹಾಗೂ ಆರೋಗ್ಯ ಹದಗೆಡುವಲ್ಲಿ ಪ್ರಮುಖ ಕಾರಣವಾಗುತ್ತಿವೆ ಎಂದು ಡಾ.ಮುರ್ರೆ ತಿಳಿಸಿದ್ದಾರೆ.