ನವದೆಹಲಿ: ವಿರೋಧ ಪಕ್ಷಗಳ ನಾಯಕರ ಗದ್ದಲದ ನಡುವೆಯೇ 'ಕೌಟುಂಬಿಕ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆ, 2022'ಗೆ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದನೆ ದೊರೆಯಿತು. ಈ ಮಸೂದೆಯನ್ನು ಲೋಕಸಭೆಯಲ್ಲಿ ಕಳೆದ ವಾರ ಅಂಗೀಕರಿಸಲಾಗಿತ್ತು.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು, ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದವು.
ಮಸೂದೆ ಕುರಿತ ಚರ್ಚೆ ವೇಳೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್ ರಿಜುಜು, ಬಾಕಿ ಇರುವ ಪ್ರಕರಣಗಳ ಇತ್ಯರ್ಥದ ದೃಷ್ಟಿಯಿಂದ ಮಸೂದೆಗೆ ಅಂಗೀಕಾರ ದೊರೆಯುವ ಅಗತ್ಯದ ಬಗ್ಗೆ ಮಾತನಾಡಿದರು.
ದೇಶದಲ್ಲಿ ಸದ್ಯ 715 ಕೌಟುಂಬಿಕ ನ್ಯಾಯಾಲಯಗಳಿದ್ದು, 11 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ಕೌಟುಂಬಿಕ ನ್ಯಾಯಾಲಯ ಸ್ಥಾಪಿಸುವುದಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಕೌಟುಂಬಿಕ ವಿಚಾರಗಳತ್ತ ಗಮನ ಹರಿಸುವಂತೆ ನ್ಯಾಯಾಂಗಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಮುಂದುವರಿದು, ಭಾರತದಲ್ಲಿ ಮದುವೆ ಎಂಬುದು ಕೇವಲ ಇಬ್ಬರು ವ್ಯಕ್ತಿಗಳ ಒಂದಾಗುವುಷ್ಟೇ ಅಲ್ಲ. ಬದಲಾಗಿ ಕುಟುಂಬ ಮತ್ತು ಸಮುದಾಯಗಳ ಸಂಗಮವೂ ಹೌದು. ಮದುವೆ ಮುರಿದುಬಿದ್ದರೆ, ವ್ಯವಸ್ಥೆಯೇ ಚೂರಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ವಿರೋಧ ಪಕ್ಷಗಳ ನಾಯಕರ ವಿರುದ್ಧವೂ ಕಿಡಿಕಾರಿದ ರಿಜುಜು, ಮಸೂದೆ ವಿಚಾರವಾಗಿ ವಿಸ್ತೃತವಾದ ಚರ್ಚೆ ನಡೆಸುವ ಅಗತ್ಯ ಇತ್ತು. ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದ್ದಾರೆ.
ಮಸೂದೆಗೆ ಅನುಮೋದನೆ ದೊರೆಯುತ್ತಿದ್ದಂತೆಯೇ, ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಕಲಾಪವನ್ನು ನಾಳೆಗೆ (ಶುಕ್ರವಾರಕ್ಕೆ) ಮುಂದೂಡಿದರು.
ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ-1984ರ ಪ್ರಕಾರ, ರಾಜ್ಯ ಸರ್ಕಾರಗಳು ಹತ್ತು ಲಕ್ಷಕ್ಕಿಂತ ಹೆಚ್ಚಿರುವ ಯಾವುದೇ ನಗರ ಅಥವಾ ಪಟ್ಟಣಗಳಲ್ಲಿ ಕಡ್ಡಾಯವಾಗಿ ಕೌಟುಂಬಿಕ ನ್ಯಾಯಾಲಯ ಸ್ಥಾಪಿಸಬೇಕಿದೆ.