ಬದಿಯಡ್ಕ: ಮಾನ್ಯದ ಯಕ್ಷಮಿತ್ರ ಸಾಂಸ್ಕøತಿಕ ಸಂಘ ಹಾಗೂ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಮದ್ ರಾಮಾಯಣ ಪ್ರವಚನ ಕಾರ್ಮಾರು ಮಹಾವಿಷ್ಣು ಕ್ಷೇತ್ರದಲ್ಲಿ ಬುಧವಾರ ಆರಂಭಗೊಂಡಿತು. ಹಿರಿಯ ಧಾರ್ಮಿಕ ಮುಖಂಡ ಬಿ.ವಸಂತ ಪೈ ಉದ್ಘಾಟಿಸಿದರು. ಅವರು ಶ್ರೀ ಸಂದರ್ಭ ಮಾತನಾಡಿ, ಧಾರ್ಮಿಕ ಅರಿವಿನ ಕೊರತೆಗೆ ಅವಕಾಶವಿರುವ ಇಂದಿನ ಕಾಲಘಟ್ಟದಲ್ಲಿ ಗ್ರಂಥಗಳ ಪ್ರವಚನದಂತಹ ಕಾರ್ಯಕ್ರಮಗಳು ಸಕಾಲಿಕವಾದುದು. ನಮ್ಮ ಓದಿಗಿಂತ ವಿಭಿನ್ನವಾದ ಅರ್ಥವಿಸ್ತಾರತೆ ಹೊಂದಿರುವ ರಾಮಾಣದಂತಹ ಗ್ರಂಥದ ನೈಜ ಬೆಳಕು ಲಭಿಸಬೇಕಾದರೆ ಪ್ರಾಜ್ಞರ ಪ್ರವಚನ ಹೆಚ್ಚು ಪರಿಣಾಮಕಾರಿ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರಾಮಾಯಣ ಪ್ರವಚನ ನಮ್ಮ ಕಣ್ಣು ತೆರೆಯಿಸಲಿ, ಯಶಸ್ವಿಯಾಗಲಿ ಎಂದು ತಿಳಿಸಿದರು.
ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆ ವಹಿಸಿದರು. ಯಕ್ಷಮಿತ್ರರು ಸಾಂಸ್ಕøತಿಕ ಸಂಘದ ಕೃಷ್ಣಮೂರ್ತಿ ಪುದುಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯಕ್ಷ ಮಿತ್ರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ವಿಜಯಕುಮಾರ್ ಮಾನ್ಯ ವಂದಿಸಿದರು. ಈ ತಿಂಗಳ 16 ರ ವರೆಗೆ ಶ್ರೀಮದ್ ರಾಮಾಯಣ ಪ್ರವಚನ ನಡೆಯಲಿದ್ದು, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಪ್ರವಚನ ನಡೆಸುತ್ತಿರುವರು.