ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಭಾನುವಾರ ರಾಷ್ಟ್ರವನ್ನುದ್ದೇಶಿಸಿ ತಮ್ಮ ಚೊಚ್ಚಲ ಭಾಷಣ ಮಾಡಲಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರಪತಿಗಳ ಭಾಷಣವನ್ನು ಆಲ್ ಇಂಡಿಯಾ ರೇಡಿಯೊ ಮತ್ತು ದೂರದರ್ಶನದ ಎಲ್ಲಾ ಚಾನಲ್‌ಗಳಲ್ಲಿ ಸಂಜೆ 7 ರಿಂದ ಹಿಂದಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ನಂತರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
'ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರವಾಗುವ ಹಿಂದಿ ಮತ್ತು ಇಂಗ್ಲಿಷ್ ಭಾಷಣವನ್ನು ದೂರದರ್ಶನದ ಪ್ರಾದೇಶಿಕ ಚಾನೆಲ್‌ಗಳು ಸ್ಥಳೀಯ ಭಾಷೆಗಳಲ್ಲಿ ನಂತರ ಪ್ರಸಾರ ಮಾಡುತ್ತವೆ. ರೇಡಿಯೊ ತನ್ನ ಪ್ರಾದೇಶಿಕ ನೆಟ್‌ವರ್ಕ್‌ಗಳಲ್ಲಿ ರಾತ್ರಿ 9.30ಕ್ಕೆ ಭಾಷಣ ಪ್ರಸಾರ ಮಾಡಲಿದೆ' ಎಂದು ಹೇಳಿಕೆ ತಿಳಿಸಿದೆ.
ಒಡಿಶಾ ಮೂಲದ ಸಂತಾಲ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು (64) ಜುಲೈ 25 ರಂದು 15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ಮತ್ತು ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮುರ್ಮು ಅವರು ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ರಾಷ್ಟ್ರಪತಿಯೂ ಹೌದು.