ನವದೆಹಲಿ: ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ದೇಶದಾದ್ಯಂತ ನಡೆಯುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ) ಆರಂಭಿಕ ಹಂತಗಳಲ್ಲಿ ಎದುರಾದ ತಾಂತ್ರಿಕ ಲೋಪಗಳು, ಸಿಯುಇಟಿ ಜತೆಗೆ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ವಿಲೀನಗೊಳಿಸುವ ಉದ್ದೇಶಿತ ವಿಸ್ತರಣಾ ಯೋಜನೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದರು.
'ಸಿಯುಇಟಿಗೆ (ಯುಜಿ) ಎದುರಾದ ತಾಂತ್ರಿಕ ಸಮಸ್ಯೆಗಳನ್ನು ಹಿನ್ನಡೆ ಎಂದು ಭಾವಿಸುವುದಿಲ್ಲ. ಬದಲಿಗೆ ಅದನ್ನು ಒಂದು ಪಾಠ ಎಂದೇ ಪರಿಗಣಿಸುತ್ತೇವೆ. ಈ ಲೋಪಗಳು ಪರೀಕ್ಷೆಯ ವಿಸ್ತರಣಾ ಯೋಜನೆಗೆ ಆಡ್ಡಿಯಾಗದು. ಬದಲಿಗೆ ಲೋಪಗಳನ್ನು ಸರಿಪಡಿಸಿಕೊಂಡು ವರ್ಷಕ್ಕೆ ಎರಡು ಬಾರಿ ಪರೀಕ್ಷೆಗಳನ್ನು ನಡೆಸುವ ಯೋಜನೆಯಿದೆ' ಎಂದು ಅವರು ಪ್ರತಿಕ್ರಿಯಿಸಿದರು.
'ವಿವಿಧ ಪ್ರವೇಶ ಪರೀಕ್ಷೆಗಳ ಬದಲಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆಗೊಳಿಸುವ ಆಶಯವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹೊಂದಿದೆ. ಆದರೆ ಯಾವುದೇ ತರಾತುರಿಯಿಲ್ಲದೆ, ಯೋಜನಾ ಬದ್ಧವಾಗಿ ಇದನ್ನು ಜಾರಿಗೊಳಿಸುತ್ತೇವೆ' ಎಂದು ಅವರು ಹೇಳಿದರು.
ತಜ್ಞರ ಸಮಿತಿ:
'ಈ ತಿಂಗಳಾಂತ್ಯದ ವೇಳೆಗೆ ತಜ್ಞರ ಸಮಿತಿ ರಚನೆಯಾಗಲಿದೆ. ಇದು ದೇಶ ಮತ್ತು ವಿದೇಶಗಳಲ್ಲಿ ಜರುಗುತ್ತಿರುವ ಎಲ್ಲ ಪ್ರಮುಖ ಪ್ರವೇಶ ಪರೀಕ್ಷೆಗಳ ಬಗ್ಗೆ ಅಧ್ಯಯನ ನಡೆಸಲಿದೆ. ಮುಂದಿನ ವರ್ಷದಿಂದಲೇ ಈ ಯೋಜನೆ ಜಾರಿಯಾಗಬೇಕು ಎಂದರೆ, ಅದಕ್ಕೆ ನಾವು ಈಗಿನಿಂದಲೇ ಪೂರ್ವ ಸಿದ್ಧತೆ ನಡೆಸಬೇಕಿದೆ' ಎಂದು ಜಗದೀಶ್ ವಿವರಿಸಿದರು.
'ಈ ವಿಚಾರದಲ್ಲಿ ಎಲ್ಲ ಭಾಗೀದಾರರಲ್ಲೂ ಒಮ್ಮತ ಮೂಡಿಸಬೇಕಿದೆ. ಅದರ ಜತೆಗೆ ವಿದ್ಯಾರ್ಥಿಗಳ ಕಲಿಕಾಮಟ್ಟಕ್ಕೆ ತಕ್ಕಂತೆ ವಿವಿಧ ವಿಷಯಗಳಲ್ಲಿ ಪಠ್ಯಕ್ರಮ ರೂಪಿಸುವುದೂ ನಮ್ಮ ಮುಂದಿರುವ ಪ್ರಮುಖ ಸವಾಲು' ಎಂದು ಅವರು ಹೇಳಿದರು.
ನೀಟ್ (ಯುಜಿ) ದೇಶದಲ್ಲಿ ನಡೆಯುವ ಅತಿದೊಡ್ಡ ಪ್ರವೇಶ ಪರೀಕ್ಷೆಯಾಗಿದ್ದು, ಸರಾಸರಿ 18 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿರುತ್ತಾರೆ. ಈ ವರ್ಷದ ಸಿಯುಇಟಿ ಪರೀಕ್ಷೆಗೆ 14.9 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ವರ್ಷಕ್ಕೆ ಎರಡು ಬಾರಿ ನಡೆಯುವ ಜೆಇಇ (ಮೇನ್ಸ್) ಕಂಪ್ಯುಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಆಗಿದ್ದರೆ, ನೀಟ್ 'ಪೆನ್ನು ಮತ್ತು ಪೇಪರ್' ಮಾದರಿಯ ಪರೀಕ್ಷೆಯಾಗಿದೆ.
ಸಿಬಿಟಿ ಮಾದರಿಗೆ ಆದ್ಯತೆ:
'ಭವಿಷ್ಯದಲ್ಲಿ ಕಂಪ್ಯುಟರ್ ಆಧಾರಿತ ಪರೀಕ್ಷೆಗಳೇ (ಸಿಬಿಟಿ) ಹೆಚ್ಚಾಗಿ ನಡೆಯಲಿವೆ. ಪೆನ್ನು ಮತ್ತು ಪೇಪರ್ ಮಾದರಿ ಪರೀಕ್ಷೆಗಳಿಗೆ ಸರಕು, ಸಾಮಗ್ರಿಗಳನ್ನು ಸಾಗಿಸುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸುವ ಯೋಜನೆ ನಮ್ಮ ಮುಂದಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಪ್ರತಿ ಹಂತದ ಪರೀಕ್ಷೆಗಳೂ ಕೆಲ ದಿನಗಳವರೆಗೂ ನಡೆಯುತ್ತವೆ. ಜೆಇಇ ಮತ್ತು ನೀಟ್‌ಗೆ ಸಂಬಂಧಿಸಿದ ವಿಷಯಗಳಾದ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವವಿಜ್ಞಾನ ವಿಷಯಗಳು ನಿಗದಿತ ದಿನಗಳಂದು ನಡೆಯಲಿವೆ. ಉಳಿದ ದಿನಗಳಲ್ಲಿ ಇತಿಹಾಸ, ರಾಜ್ಯಶಾಸ್ತ್ರ ಸೇರಿದಂತೆ ಇತರ ವಿಷಯಗಳ ಪರೀಕ್ಷೆಗಳಿಗೆ ದಿನ ನಿಗದಿಪಡಿಸಲಾಗುತ್ತದೆ. ಈ ಮೂಲಕ ಒಂದೇ ದಿನ ಬೇರೆ ಬೇರೆ ವಿಷಯಗಳ ಪರೀಕ್ಷೆಗಳು ಬಾರದಂತೆ ಎಚ್ಚರವಹಿಸಲಾಗುತ್ತದೆ' ಎಂದು ಅವರು ಪ್ರತಿಕ್ರಿಯಿಸಿದರು.