ಮುಳ್ಳೇರಿಯ: ಅದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ಭೌತ ಶಾಸ್ತ್ರ(ಫಿಸಿಕಲ್ ಸಯನ್ಸ್) ಶಿಕ್ಷಕರ ಹುದ್ಧೆಗೆ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಲಾಗಿದ್ದು ಇದರ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟಿಸಿದ್ದಾರೆ.
ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಆದೇಶದಂತೆ ಕನ್ನಡ ತಿಳಿಯದ ಸುಹಿರಿ.ಎಸ್ ಎಂಬವರನ್ನು ಆದೂರು ಪ್ರೌಢ ಶಾಲೆಗೆ ಪ್ರಸ್ತುತ ವರ್ಗಾವಣೆಗೊಳಿಸಲಾಗಿದೆ. ಹಾಗೆಯೇ ಇವರು ಮಂಗಳವಾರ ಆದೂರು ಶಾಲೆಯಲ್ಲಿ ತನ್ನ ವೃತ್ತಿಗೆ ಪುನಃ ಸೇರ್ಪಡೆಗೊಂಡಿದ್ದಾರೆ. ಆದರೆ ಇವರು 14-1-2019ರಲ್ಲಿ ಜಿಎಚ್‍ಎಸ್‍ಎಸ್ ಪೈವಳಿಕೆಯಲ್ಲಿ ಪ್ರಥಮ ಬಾರಿಗೆ ಫಿಸಿಕಲ್ ಸಯನ್ಸ್(ಕನ್ನಡ ಮಾಧ್ಯಮ) ಶಿಕ್ಷಕರಾಗಿ ಹುದ್ಧೆಗೆ ಸೇರ್ಪಡೆಗೊಂಡಿದ್ದರು. ಆದರೆ ಕನ್ನಡ ಭಾಷಾ ಪ್ರಾವೀಣ್ಯತೆಯು ಇಲ್ಲದ ಕಾರಣ ಊರವರ ಮತ್ತು ಪೋಷಕರ ಪ್ರತಿಭಟನೆಯ ಫಲವಾಗಿ ಒಂದು ವಾರದ ನಂತರ 6ತಿಂಗಳ ಕಾಲ ವೇತನವಿಲ್ಲದ ರಜೆಯ ಮೇಲೆ ತೆರಳಲು ಇವರಿಗೆ ಆದೇಶ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕೋರ್ಟಿನ ಆದೇಶದಂತೆ ಇವರು ಕನ್ನಡ ಭಾಷಾ ಪ್ರಾವೀಣ್ಯತೆಯನ್ನು ಪಡೆಯುವುದಕ್ಕಾಗಿ ಮೈಸೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಹತ್ತು ತಿಂಗಳ ತರಬೇತಿಗೆ ತೆರಳಿದರು. ಆ ಪ್ರಕಾರ ತರಬೇತಿ ಪಡೆದ ಇವರು ಪುನಃ ಈ ಹುದ್ಧೆಗೆ ಮರು ಸೇರ್ಪಡೆಗೆ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಆದೂರು ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ಧೆಗೆ ಈಗ ಪುನಃ ಸೇರ್ಪಡೆಗೊಂಡಿದ್ದಾರೆ.
ಆದರೆ ತರಗತಿಗಳಲ್ಲಿ ಕನ್ನಡ ಕಲಿಯದೆ ಕೇಲವ ಕನ್ನಡ ಭಾಷೆಯ ತರಬೇತಿಯನ್ನು ಪಡೆದು ಬಂದ ಕಾರಣ ಈ ಶಿಕ್ಷಕರ ಬೋಧನೆಯು ವಿದ್ಯಾರ್ಥಿಗಳಿಗೆ ಅರ್ಥೈಸಿಕೊಳ್ಳಲು ಅಸಾಧ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಹಾಗೆ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ಮನವಿಯನ್ನು ನೀಡಿದ್ದು ಈ ಶಿಕ್ಷಕರನ್ನು ವರ್ಗಾಯಿಸುವ ವರೆಗೆ ತರಗತಿಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಸಹಾ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕೃತರನ್ನು ಒತ್ತಾಯಿಸಿದ್ದಾರೆ. ಕನ್ನಡಪರ ಸಂಘ ಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ.
ಮತ್ತೆ ಬಂದ ಗುಮ್ಮ: ಮುಗಿಯದ ಬೇಗುದಿ: ಆದೂರು ಪ್ರೌಢ ಶಾಲೆಯಲ್ಲಿ ಕನ್ನಡ ತರಗತಿಗೆ ಮಲೆಯಾಳ ಶಿಕ್ಷಕರ ನೇಮಕಾತಿ; ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ
0
ಆಗಸ್ಟ್ 03, 2022