ಗುವಾಹಟಿ: ಅಸ್ಸಾಮಿನ ಶಿವಸಾಗರದಲ್ಲಿ ನಾಗಾಲ್ಯಾಂಡ್ ನಿವಾಸಿಯೋರ್ವ ಕಸ್ಟಡಿಯಲ್ಲಿ ಮೃತಪಟ್ಟಿದ್ದು,ಈ ಕುರಿತು ಕ್ರಮಾನುಷ್ಠಾನ ವರದಿಯನ್ನು ನಾಲ್ಕು ವಾರಗಳಲ್ಲಿ ತನಗೆ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವು ಜಿಲ್ಲಾ ಪೊಲೀಸರಿಗೆ ಸೂಚಿಸಿದೆ.
ಘಟನೆಯನ್ನು ಖಂಡಿಸಿ ನಾಗಾಲ್ಯಾಂಡ್‌ನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ.
ಆ.21ರಂದು ಜೆಲೆಕಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಚಿತ್ರಹಿಂಸೆಯಿಂದಾಗಿ ಬುಡಕಟ್ಟು ಸಮುದಾಯದ ಇ.ಹೆನ್ವೈ ಫಾಮ್ (35) ಮೃತಪಟ್ಟಿರುವುದಾಗಿ ಇಂಡಿಜಿನಿಯಸ್ ಲಾಯರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಆರೋಪಿಸಿದೆ.
ನಾಗಾಲ್ಯಾಂಡ್‌ನ ರಾಜ್ಯಸಭಾ ಸದಸ್ಯೆ ಎಸ್.ಫಂಗ್ನಾನ್ ಕೊನ್ಯಾಕ್ ಅವರು ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದ್ದರು.
'ನಾಗಾ ಯುವಕ ಇ.ಹೆನ್ವೈ ಫಾಮ್ ಸಾವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸಬೇಕು. ತಪ್ಪಿತಸ್ಥರನ್ನು ಬಿಡಬಾರದು. ಒಂದು ಜೀವವನ್ನು ಕಳೆದುಕೊಂಡಿದ್ದೇವೆ ' ಎಂದು ಅವರು ಟ್ವೀಟಿಸಿದ್ದರು.
ಆ.25ರಂದು ಎನ್ ಎಚ್‌ಆರ್‌ಸಿಗೆ ದೂರು ಸಲ್ಲಿಸಲಾಗಿದೆ ಮತ್ತು ಘಟನೆಯ ಗಂಭೀರತೆಯನ್ನು ಪರಿಗಣಿಸಿ ಅದು ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿದೆ ಎಂದು ಲಾಯರ್ಸ್ ಅಸೋಸಿಯೇಷನ್‌ನ ಕಾರ್ಯಕ್ರಮ ಸಂಯೋಜಕ ತೇಜಾಂಗ್ ಚಕ್ಮಾ ತಿಳಿಸಿದರು.
ನಾಗಾಲ್ಯಾಂಡ್‌ನ ಮೊಕೊಕ್‌ಚಂಗ್ ಜಿಲ್ಲೆಯ ಅನಕಿ-ಸಿ ಗ್ರಾಮದ ನಿವಾಸಿ ಫಾಮ್ ಆ.16ರಂದು ಮಹಿಳೆಯೋರ್ವಳೊಂದಿಗೆ ಗೆಲೆಕಿಗೆ ಪ್ರಯಾಣಿಸುತ್ತಿದ್ದಾಗ ಅವರಿಬ್ಬರನ್ನು ಬಂಧಿಸಲಾಗಿತ್ತು. ಫಾಮ್‌ನನ್ನು ಕಸ್ಟಡಿಗೆ ಒಪ್ಪಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಶಂಕಾಸ್ಪದ ಸನ್ನಿವೇಶಗಳಡಿ ಆತ ಮೃತಪಟ್ಟಿದ್ದಾನೆ ಎಂದು ಅಸೋಷಿಯೇಷನ್ ತಿಳಿಸಿದೆ.
ಬಂಧನದ ವೇಳೆ ಫಾಮ್ ದೈಹಿಕವಾಗಿ ಸದೃಢನಾಗಿದ್ದ. ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದು ಆತನ ಸಾವಿಗೆ ಕಾರಣವಾಗಿದೆ ಎಂದು ಕುಟುಂಬವು ಆರೋಪಿಸಿದೆ.
ಫಾಮ್‌ನನ್ನು ಸಾವಿಗೆ ಎರಡು ದಿನಗಳ ಮೊದಲು ಜೈಲು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆತ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ ಎಂದು ಹೇಳಿದ ಶಿವಸಾಗರ ಎಸ್‌ಪಿ ಶುಭ್ರಜ್ಯೋತಿ ಬೋರಾ,ಕಸ್ಟಡಿಯಲ್ಲಿ ಹಿಂಸೆಯ ಆರೋಪವನ್ನು ತಳ್ಳಿಹಾಕಿದರು.
ಶುಕ್ರವಾರ ಘಟನೆಯನ್ನು ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಪೂರ್ವ ನಾಗಾಲ್ಯಾಂಡ್‌ನಾದ್ಯಂತ ಸಾರ್ವಜನಿಕ ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದ್ದರು. ಫಾಮ್ ಸಾವಿನ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ನಡೆಸಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.