ಗುವಾಹಟಿ: 'ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರದ ರಾಜಧಾನಿಯನ್ನು ಲಂಡನ್ ಅಥವಾ ಪ್ಯಾರಿಸ್ ನಗರಗಳ ಹಾಗೆ ಮಾರ್ಪಾಡು ಮಾಡುವುದಾಗಿ ಹೇಳಿದ್ದರು. ಚುನಾವಣೆ ವೇಳೆ ನೀಡಿದ್ದ ಈ ಭರವಸೆ ಈಡೇರಿಸುವಲ್ಲಿ ವಿಫಲರಾಗಿರುವ ಅವರು ಈಗ ದೆಹಲಿಯನ್ನು ಭಾರತದ ಸಣ್ಣ ನಗರಗಳೊಂದಿಗೆ ಹೋಲಿಕೆ ಮಾಡಲು ಮುಂದಾಗುತ್ತಿದ್ದಾರೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಟೀಕಿಸಿದ್ದಾರೆ.
ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಭಾನುವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, 'ಚುನಾವಣೆ ವೇಳೆ ಕೊಟ್ಟ ಭರವಸೆ ಈಡೇರಿಸಲು ನಿಮಗೆ ಆಗಲಿಲ್ಲ. ಹೀಗಾಗಿ ಈಗ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳ ಸಣ್ಣ ನಗರಗಳೊಂದಿಗೆ ದೆಹಲಿಯನ್ನು ಹೋಲಿಕೆ ಮಾಡುತ್ತಿದ್ದೀರಿ' ಎಂದಿದ್ದಾರೆ.
'ಪ್ರವಾಹದಿಂದ ಅಸ್ಸಾಂ ತತ್ತರಿಸಿದ್ದಾಗ, ಜನರು ಸಂಕಷ್ಟಕ್ಕೆ ಸಿಲುಕಿದ್ದಾಗ ಈ ರಾಜ್ಯಕ್ಕೆ ಬರಲು ನಿಮಗೆ ಮನಸ್ಸಾಗಲಿಲ್ಲ. ಈಗ ರಾಜ್ಯಕ್ಕೆ ಭೇಟಿ ನೀಡುವುದಾಗಿ ಹೇಳುತ್ತಿದ್ದೀರಿ. ಈ ಸಂಬಂಧ ನಿಮ್ಮ ಉಪಮುಖ್ಯಮಂತ್ರಿಯವರಿಗೆ ಈಗಾಗಲೇ ಆಹ್ವಾನ ಕಳುಹಿಸಲಾಗಿದೆ' ಎಂದು ಹೇಳಿದ್ದಾರೆ.