ನವದೆಹಲಿ: ದೇಶದ ಶೇಕಡಾ 43ರಷ್ಟು ಜನಪ್ರತಿನಿಧಿಗಳು ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾರೆ. ಇಂಥವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಕಾನೂನಿನ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, 'ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಅಪರಾಧ ಹಿನ್ನೆಲೆ ಹೊಂದಿದ ಶೇಕಡ 43ರಷ್ಟು ಜನಪ್ರತಿನಿಧಿಗಳು ಚುನಾಯಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಬೇಕಾದ ಅಗತ್ಯವಿದೆ ಎಂದು ಭಾವಿಸುತ್ತೇನೆ. ಆದರೆ ಯಾವ ರಾಜಕೀಯ ಪಕ್ಷಗಳ ನೇತಾರರೂ ಈ ಕೆಲಸಕ್ಕೆಮುಂದಾಗುವುದಿಲ್ಲ. ನಾವೇ ಕಾನೂನಿಗೆ ತಿದ್ದುಪಡಿ ತರಬೇಕು' ಎಂದು ಹೇಳಿದರು.
ಈ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಮನವಿ ಮಾಡಿದರು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸುಪ್ರೀಂಕೋರ್ಟ್ ಅಂಗಳದಲ್ಲಿ ದ್ವಜಾರೋಹಣ ನೆರವೇರಿಸಿದರು.