ನವದೆಹಲಿ: ರಾಷ್ಟ್ರೀಯ ರಾಜಧಾನಿಯ ಗಡಿಯಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಟಿಕಾಯತ್ ದೆಹಲಿಯ ಮಧು ವಿಹಾರ್ ಪೊಲೀಸ್ ಠಾಣೆಯ ವಶದಲ್ಲಿದ್ದಾರೆ.
ಇದಕ್ಕೂ ಮುನ್ನಾ ವಿಡಿಯೋ ಬಿಡುಗಡೆ ಮಾಡಿರುವ ಅವರು, ಪೊಲೀಸರು ತಮ್ಮನ್ನು ತಡೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸರು ರಾಕೇಶ್ ಟಿಕಾಯತ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮೂಲಗಳ ಪ್ರಕಾರ, ದೇಶದ ನಿರುದ್ಯೋಗದ ವಿರುದ್ಧ ಜಂತರ್- ಮಂತರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಟಿಕಾಯತ್ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಟಿಕಾಯತ್, ಈ ಬಂಧನ ಹೊಸ ಕ್ರಾಂತಿಯನ್ನು ತರಲಿದೆ. ಕೊನೆಯ ಉಸಿರು ಇರುವವರೆಗೂ ಈ ಹೋರಾಟ ಮುಂದುವರೆಯಲಿದೆ. ನಿಲ್ಲುವುದಿಲ್ಲ. ಬಿಡುವುದಿಲ್ಲ. ದಣಿವಾಗುವುದಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಸರ್ಕಾರದ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಗೋಪಾಲ್ ರೈ ಅವರು ಟಿಕಾಯತ್ ಬಂಧನವನ್ನು ಖಂಡಿಸಿದ್ದಾರೆ.