ತಿರುವನಂತಪುರಂ: ಜಿ-23ರ ಗುಂಪುಗಾರಿಕೆ ಪಕ್ಷದಲ್ಲಿ 'ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ' ಎಂದು ಕಾಂಗ್ರೆಸ್ ಮತ್ತೆ ಪ್ರತಿಪಾದಿಸಿದ್ದು, 'ಈ ಪುರಾಣವನ್ನು ಮುಂದುವರಿಸಲು ಮಾಧ್ಯಮಗಳು ಕಾರಣ' ಎಂದು ಆರೋಪಿಸಿದೆ.
ಕಾಂಗ್ರೆಸ್ ನ ಭಿನ್ನಮತೀಯರ ಗುಂಪಿನ ನೇತೃತ್ವ ವಹಿಸಿದ್ದ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದ ಕೆಲವು ದಿನಗಳ ನಂತರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಜಿ-23 ಮಾಧ್ಯಮಗಳ ಸೃಷ್ಟಿ ಎಂದು ಪ್ರತಿಪಾದಿಸಿದ್ದು, ಅಂತಹ ಗುಂಪುಗಳ "ಪುರಾಣ" ವನ್ನು "ಶಾಶ್ವತಗೊಳಿಸುತ್ತಿದೆ" ಎಂದು ಆರೋಪಿಸಿದರು.
"ಜಿ-23 ಎಂಬುದು ನಿಮ್ಮ ಕಲ್ಪನೆ. ಜಿ-23 ಈಗ ಎಲ್ಲಿದೆ? ಅದು ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ. ಜಿ-23ರ ಈ ಪುರಾಣವನ್ನು ಏಕೆ ಮುಂದುವರಿಸುತ್ತಿದ್ದೀರಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. ಅಲ್ಲದೆ ಜಿ-23 ಇಲ್ಲ. ಜಿ-ಕಾಂಗ್ರೆಸ್ (ಗಾಂಧಿವಾದಿ ಕಾಂಗ್ರೆಸ್) ಮಾತ್ರ ಇದೆ ಎಂದು ಹೇಳಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ಮುಂಬರುವ ಬೃಹತ್ ಸಾಂಸ್ಥಿಕ ಕಾರ್ಯಕ್ರಮ ಭಾರತ್ ಜೋಡೋ ಯಾತ್ರೆಯಲ್ಲಿ ಭಿನ್ನಮತೀಯ ಗುಂಪಿನ ನಾಯಕರು. ಭಾಗವಹಿಸುವ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ರಮೇಶ್ ಈ ರೀತಿ ಪ್ರತಿಕ್ರಿಯಿಸಿದರು.
ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಮತ್ತು ಶಶಿ ತರೂರ್ ಸೇರಿದಂತೆ ಕೇರಳದ ನಾಯಕರು ಭಾಗವಹಿಸಿದ್ದ ಮಾಧ್ಯಮ ಸಂವಾದದ ಸಂದರ್ಭದಲ್ಲಿ ರಮೇಶ್ ಮಾತನಾಡುತ್ತಿದ್ದರು. ಇದೇ ವೇಳೆ ಮಾತನಾಡಿದ ದಿಗ್ವಿಜಯ್ ಸಿಂಗ್ ಅವರು, 'ಅವರು ಸೈದ್ಧಾಂತಿಕ ಸಮಸ್ಯೆಗಳಿಂದಾಗಿ ಪಕ್ಷದಿಂದ ಹೊರನಡೆದಿದ್ದಾರೆ. ನೀವು ಹೇಳುತ್ತಿರುವ ವ್ಯಕ್ತಿಯ ಒಂದು ಹೇಳಿಕೆಯನ್ನು ಕೇಳಿ, ಅವರು ಆರ್‌ಎಸ್‌ಎಸ್ ಅಥವಾ ಬಿಜೆಪಿ ಅಥವಾ ಮೋದಿ ಅಥವಾ ಬಿಜೆಪಿ ಸರ್ಕಾರದ ಕಾರ್ಯನಿರ್ವಹಣೆಯ ವಿರುದ್ಧ ಯಾವುದೇ ಹೇಳಿಕೆ ನೀಡಿದ್ದಾರೆಯೇ? ಇದು ಯಾವ ರೀತಿಯ ರಾಜಕೀಯ? ಎಂದು ಕಿಡಿಕಾರಿದರು.
2020 ರಲ್ಲಿ ಪಕ್ಷದಲ್ಲಿ ಸುಧಾರಣೆಗೆ ಒತ್ತಾಯಿಸಿ ಜಿ-23 ಗುಂಪು ಬರೆದ ಪತ್ರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾದ ತರೂರ್ ಕೂಡ ಸುದ್ದಿಗಾರರೊಂದಿಗೆ ಮಾತನಾಡಿದ್ದು, 'ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ವರದಿಗಳು ಕೇವಲ ಊಹಾಪೋಹ ಎಂದು ಹೇಳಿದರು. ತಿರುವನಂತಪುರಂ ಸಂಸದರು ಕೂಡ ಆಗಿರುವ ತರೂರ್, ಚುನಾವಣಾ ಅಧಿಸೂಚನೆ ಪ್ರಕಟವಾದ ನಂತರವಷ್ಟೇ ತಮ್ಮ ಉಮೇದುವಾರಿಕೆ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ಪೂರ್ಣಾವಧಿ ಅಧ್ಯಕ್ಷರ ಚುನಾವಣೆಯನ್ನು ಅಕ್ಟೋಬರ್ 17 ರಂದು ನಡೆಸಲು ನಿರ್ಧರಿಸಿದೆ. ಚುನಾವಣೆಗೆ ಸೆಪ್ಟೆಂಬರ್ 22 ರಂದು ಅಧಿಸೂಚನೆ ಹೊರಡಿಸಲಾಗುವುದು ಮತ್ತು ಸೆಪ್ಟೆಂಬರ್ 24 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಸಿಡಬ್ಲ್ಯುಸಿಯ ಸುಮಾರು 30 ನಿಮಿಷಗಳ ಸಭೆಯ ನಂತರ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.