ಶ್ರೀಹರಿಕೋಟಾ: ಭೂ ವೀಕ್ಷಣಾ ಉಪಗ್ರಹ ಹಾಗೂ ವಿದ್ಯಾರ್ಥಿಗಳ ಆಝಾದಿ ಎಂಬ ಎರಡು ಉಪಗ್ರಹವನ್ನು ಹೊತ್ತೊಯ್ಯುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಥವಾ(ಇಸ್ರೊ) ISRO ಚೊಚ್ಚಲ ಉಡಾವಣೆ ನೌಕೆ ಎಸ್ ಎಸ್ ಎಲ್ ವಿ-ಡಿ1 SSLV-D1 ಅನ್ನು ಇಂದು ಬೆಳಿಗ್ಗೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಗಿದೆ.
ಇಸ್ರೋ ತನ್ನ ಉಪಗ್ರಹ ಉಡಾವಣೆಗಳನ್ನು ತ್ವರಿತಗೊಳಿಸಲು, ಅಗತ್ಯವಾದರೆ ವಾರಕ್ಕೊಮ್ಮೆ,ಸಣ್ಣ ಮತ್ತು ಕಿರು ಉಪಗ್ರಹಗಳನ್ನು ಕೆಳ ಭೂ ಕಕ್ಷೆಗೆ ಸೇರಿಸಲು ಒಟ್ಟು 500 ಕೆ.ಜಿ.ಪೇಲೋಡ್ ಸಾಮರ್ಥ್ಯದ ಎಸ್‌ಎಸ್‌ಎಲ್ವಿಯನ್ನು ನಿರ್ಮಿಸಿದೆ.
ಆದರೆ ಅಭಿವೃದ್ಧಿ ಹಂತದಲ್ಲಿಯ ಮೊದಲ ಯಾನ ಯಶಸ್ವಿಯಾಗಿಲ್ಲ. ಎಸ್‌ಎಸ್‌ಎಲ್ವಿಯ ಎಲ್ಲ ಹಂತಗಳು ನಾಮಮಾತ್ರ ಕಾರ್ಯ ನಿರ್ವಹಿಸಿವೆ ಎಂದು ಮಿಷನ್ ಕಂಟ್ರೋಲ್ ಸೆಂಟರ್ನಲ್ಲಿಯ ಇಸ್ರೋ ಅಧಿಕಾರಿಗಳು ತಿಳಿಸಿದ್ದರೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಅವರು,ತನ್ನ ತಂಡವು ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಉಡಾವಣೆಗೊಂಡ ಸುಮಾರು ಒಂಭತ್ತು ನಿಮಿಷಗಳ ಬಳಿಕ ರಾಕೆಟ್ ದತ್ತಾಂಶಗಳ ರವಾನೆಯನ್ನು ನಿಲ್ಲಿಸಿತ್ತು ಮತ್ತು ತನ್ನ ಉದ್ದೇಶಿತ ಕಕ್ಷೆಯನ್ನು ತಪ್ಪಿಸಿಕೊಂಡಿದೆ ಎನ್ನುವುದು ಸ್ವತಂತ್ರ ವರದಿಗಳಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.
ವೆಲೊಸಿಟಿ ಟ್ರಿಮ್ಮಿಂಗ್ ಮೊಡ್ಯೂಲ್ (ವಿಟಿಎಂ) ಎಂದು ಕರೆಯಲಾಗುವ ಎಸ್‌ಎಸ್‌ಎಲ್ವಿಯ ಅಂತಿಮ ಹಂತದಲ್ಲಿ ಸಮಸ್ಯೆ ಕಾಣಿಸಿಕೊಂಡಿರುವಂತಿದೆ. ನಿಗದಿಯಂತೆ ರಾಕೆಟ್ ಉಡಾವಣೆಗೊಂಡ ನಂತರ 653 ಸೆಕೆಂಡ್ಗಳಲ್ಲಿ ವಿಟಿಎಂ 20 ಸೆಕೆಂಡ್ಗಳ ಕಾಲ ದಹನಗೊಳ್ಳಬೇಕಿತ್ತು,ಆದರೆ ಅದು ಕೇವಲ 0.1 ಸೆಕೆಂಡ್ ಕಾಲ ದಹನಗೊಂಡಿತ್ತು ಮತ್ತು ಇದರಿಂದಾಗಿ ರಾಕೆಟ್ ಅಗತ್ಯ ಎತ್ತರ ವರ್ಧಕದಿಂದ ವಂಚಿತಗೊಂಡಿತ್ತು.
ರಾಕೆಟ್ ಹೊತ್ತೊಯ್ದಿದ್ದ ಇಒಎಸ್-2 ಭೂ ವೀಕ್ಷಣೆ
ಮತ್ತು ವಿದ್ಯಾರ್ಥಿಗಳು ತಯಾರಿಸಿದ್ದ ಆಝಾದಿಸ್ಯಾಟ್ ಉಪಗ್ರಹಗಳು ವಿಟಿಎಂ ದಹನದ ಬಳಿಕ
ವಾಹನದಿಂದ ಬೇರ್ಪಟ್ಟಿದ್ದವು. ಅಂದರೆ ಅವು ತಮ್ಮ ಉದ್ದೇಶಿತ ಕಕ್ಷಾ ಪಥಗಳನ್ನು
ತಪ್ಪಿಸಿಕೊಂಡಿರುವ ಮತ್ತು ಬದಲಿಗೆ ದೀರ್ಘವೃತ್ತಾಕಾದ ಕಕ್ಷೆಯನ್ನು ಪ್ರವೇಶಿಸಿರುವ
ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಉಪಗ್ರಹಗಳು ಬಳಕೆಗೆ ಸಾಧ್ಯವಾಗುವುದಿಲ್ಲ ಎಂದು ಇಸ್ರೋ
ಅಪರಾಹ್ನ ಮೂರು ಗಂಟೆಗೆ ದೃಢಪಡಿಸಿತ್ತು.
ಉಡಾವಣೆಯ ಬಳಿಕ ಟ್ವೀಟಿಸಿರುವ ಖಗೋಳ
ಶಾಸ್ತ್ರಜ್ಞ ಮತ್ತು ಸ್ಪೇಸ್ಫ್ಲೈಟ್ ಟ್ರಾಕರ್ ಜೋನಾಥನ್ ಮೆಕ್ಡೊವೆಲ್ ಅವರು, ವಿಟಿಎಂ
ವೈಫಲ್ಯದಿಂದಾಗಿ ಉಡಾವಣೆಯ ಬಳಿಕ ಕಕ್ಷೆಯಲ್ಲಿ ಉಳಿಯಬೇಕಿದ್ದ ರಾಕೆಟ್ನ ಭಾಗವು ಬದಲಿಗೆ
ಆಸ್ಟ್ರೇಲಿಯಾ ಮತ್ತು ನ್ಯೂಝಿಲಂಡ್ ಮೇಲಿನಿಂದ ಹಾದು ಹೋದ ಬಳಿಕ ಪೆಸಿಫಿಕ್ ಸಾಗರಕ್ಕೆ
ಬಿದ್ದಿರಬಹುದು ಎಂದು ಹೇಳಿದ್ದಾರೆ.
ಎಲ್ಲ ಹಂತಗಳು ಸಹಜವಾಗಿ ಕಾರ್ಯಾಚರಿಸಿವೆ. ಎರಡೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿತ್ತು. ಆದರೆ ಸಾಧಿಸಿದ ಕಕ್ಷೆಯು ನಿರೀಕ್ಷಿದ್ದಕ್ಕಿಂತ ಕಡಿಮೆಯಿತ್ತು ಮತ್ತು ಇದರಿಂದಾಗಿ ಅವು ಅಸ್ಥಿರಗೊಳ್ಳುತ್ತವೆ ಎಂಬ ಮಾಹಿತಿಯನ್ನು ಇಸ್ರೋ ಪೂರ್ವಾಹ್ನ 11.43 ಗಂಟೆಗೆ ತನ್ನ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿತ್ತು. ಅಭಿಯಾನವು ವಿಫಲವಾಗಿರುವುದನ್ನು ಮತ್ತು ವೈಫಲ್ಯಕ್ಕೆ ಕಾರಣವನ್ನು ತಾನು ಗುರುತಿಸಿದ್ದೇನೆ ಎಂದು ಇಸ್ರೋ ಅಪರಾಹ್ನ 2:48ಕ್ಕೆ ಟ್ವೀಟ್ನಲ್ಲಿ ತಿಳಿಸಿತ್ತು.
'ಎಸ್‌ಎಸ್‌ಎಲ್ವಿ-ಡಿ1 ರಾಕೆಟ್ ಉಪಗ್ರಹಗಳನ್ನು 356 ಕಿ.ಮೀ.ವೃತ್ತಾಕಾರ ಕಕ್ಷೆಯ ಬದಲು 356 ಕಿ.ಮೀ x 76 ಕಿ.ಮೀ.ದೀರ್ಘ ವೃತ್ತಾಕಾರ ಕಕ್ಷೆಯಲ್ಲಿರಿಸಿತ್ತು. ಉಪಗ್ರಹಗಳು ಇನ್ನು ಬಳಕೆಗೆ ಸಿಗುವುದಿಲ್ಲ. ಸಮಸ್ಯೆಯನ್ನು ಗುರುತಿಸಲಾಗಿದೆ. ಸೆನ್ಸರ್ ಅಥವಾ ಸಂವೇದಕ ವೈಫಲ್ಯವನ್ನು ಗುರುತಿಸುವಲ್ಲಿ ಮತ್ತು ಸಂರಕ್ಷಣಾ ಕ್ರಮವನ್ನು ಕೈಗೊಳ್ಳುವಲ್ಲಿ ವಿಲತೆಯು ಪಥ ಬದಲಾವಣೆಗೆ ಕಾರಣವಾಗಿತ್ತು. ಸಮಿತಿಯೊಂದು ಈ ಬಗ್ಗೆ ವಿಶೇಷಣೆ ನಡೆಸಿ ಅಗತ್ಯ ಶಿಫಾರಸುಗಳನ್ನು ಮಾಡಲಿದೆ. ಶಿಫಾರಸುಗಳ ಅನುಷ್ಠಾನದೊಂದಿಗೆ ಇಸ್ರೋ ಶೀಘ್ರವೇ ಎಸ್‌ಎಸ್‌ಎಲ್ವಿ-ಡಿ2ನೊಂದಿಗೆ ಮರಳಲಿದೆ ' ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.