ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ದೇಶದಲ್ಲಿ ಹೈಸ್ಪೀಡ್ 5 ಜಿ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಕುರಿತು ಸರ್ಕಾರದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಇಂದು ಟ್ವೀಟ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1ರಂದು 5G ಸೇವೆಗಳಿಗೆ ಚಾಲನೆ ನೀಡುವ ಮೂಲಕ ದೇಶದ ಡಿಜಿಟಲ್ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಟ್ವೀಟ್ ಮಾಡಿದೆ.
ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆ ಎಂದು ಹೇಳಿಕೊಳ್ಳುವ ಇಂಡಿಯಾ ಮೊಬೈಲ್ ಕಾಂಗ್ರೆಸ್, ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದೆ.
ಕಡಿಮೆ ಅವಧಿಯಲ್ಲಿ ದೇಶದಲ್ಲಿ ಶೇ. 80 ರಷ್ಟು 5 ಜಿ ಸೇವೆಗಳ ಗುರಿಯನ್ನು ಸರ್ಕಾರ ನೀಡಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕಳೆದ ವಾರ ಹೇಳಿದ್ದರು.
5G ತಂತ್ರಜ್ಞಾನದಿಂದ ದೇಶಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದು 2023 ಮತ್ತು 2040 ರ ನಡುವೆ ಭಾರತೀಯ ಆರ್ಥಿಕತೆಗೆ ₹ 36.4 ಟ್ರಿಲಿಯನ್ ($455 ಶತಕೋಟಿ) ಅನುಕೂಲ ನೀಡುವ ಸಾಧ್ಯತೆಯಿದೆ ಎಂದು ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳನ್ನು ಪ್ರತಿನಿಧಿಸುವ ಜಾಗತಿಕ ಉದ್ಯಮ ಸಂಸ್ಥೆಯ ಇತ್ತೀಚಿನ ವರದಿಯು ಅಂದಾಜಿಸಿದೆ.
2G ಮತ್ತು 3G ಯ ಪಾಲು ಶೇಕಡಾ 10 ಕ್ಕಿಂತ ಕಡಿಮೆಯಾಗುವುದರೊಂದಿಗೆ 2030 ರ ವೇಳೆಗೆ 5 ಜಿ ಸೇವೆ ದೇಶದಲ್ಲಿ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದಾಗಿರುತ್ತದೆ ಎಂದು GSMA (ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ಸ್) ವರದಿ ಹೇಳಿದೆ. ಭಾರತದಲ್ಲಿ 4ಜಿ ಸೇವೆ ಹೊಂದಿರುವ ಶೇ. 79 ರಷ್ಟು ಚಂದದಾರರು 5 ಜಿ ಗೆ ಪರಿವರ್ತನೆಯಾಗಲು ಸಿದ್ಧರಾಗಿದ್ದಾರೆ.
5 ಜಿ ತಂತ್ರಜ್ಞಾನದಿಂದ ಯಾವ ವಲಯದಲ್ಲಿ ಎಷ್ಟು ಅನುಕೂಲವಾಗಲಿದೆ ಎಂಬುದನ್ನು ಸಹ ವರದಿಯಲ್ಲಿ ತಿಳಿಸಲಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿ ಶೇ. 20, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ. 12 ಮತ್ತು ಕೃಷಿ ವಲಯದಲ್ಲಿ ಶೇ. 11 ರಷ್ಟು ಪ್ರಮಾಣದಲ್ಲಿ ಲಾಭವಾಗುವ ಸಾಧ್ಯತೆಯಿರುವುದಾಗಿ ಅಂದಾಜಿಸಲಾಗಿದೆ.