ನವದೆಹಲಿ: ಈ ವರ್ಷ ಖಾರಿಫ್ ಋತುವಿನಲ್ಲಿ ಭಾರತದ ಅಕ್ಕಿ ಉತ್ಪಾದನೆಯು 10-12 ಮಿಲಿಯನ್ ಟನ್ ಗಳಷ್ಟು ಕುಸಿಯಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.
ಭತ್ತದ ಬಿತ್ತನೆ ಪ್ರದೇಶದ ಪ್ರಮಾಣದ ಕುಸಿತದಿಂದಾಗಿ ಈ ವರ್ಷದ ಖಾರಿಫ್ ಋತುವಿನಲ್ಲಿ ಭಾರತದ ಅಕ್ಕಿ ಉತ್ಪಾದನೆಯು 10-12 ಮಿಲಿಯನ್ ಟನ್ಗಳಷ್ಟು ಕುಸಿಯಬಹುದು ಎಂದು ಸರ್ಕಾರ ಶುಕ್ರವಾರ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು, ಭಾರತದ ಅಕ್ಕಿ ಉತ್ಪಾದನೆಯು 10-12 ಮಿಲಿಯನ್ ಟನ್ಗಳಷ್ಟು ಕುಸಿಯಬಹುದು. ಈ ಖಾರಿಫ್ ಋತುವಿನಲ್ಲಿ ಇದುವರೆಗೆ 38 ಲಕ್ಷ ಹೆಕ್ಟೇರ್ ಭತ್ತದ ವಿಸ್ತೀರ್ಣ ಕಡಿಮೆಯಾಗಿದೆ, ಏಕೆಂದರೆ ಅನೇಕ ರಾಜ್ಯಗಳಲ್ಲಿ ಕಡಿಮೆ ಮಳೆಯಾಗಿದೆ. ಆದಾಗ್ಯೂ ದೇಶವು ಅಕ್ಕಿಯಲ್ಲಿ ಹೆಚ್ಚುವರಿ ಉತ್ಪಾದನೆಯನ್ನು ಹೊಂದಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಖಾರಿಫ್ ಋತುವಿನಲ್ಲಿ ಭಾರತದ ಒಟ್ಟು ಅಕ್ಕಿ ಉತ್ಪಾದನೆಯ ಶೇಕಡಾ 80 ರಷ್ಟು ಕೊಡುಗೆ ನೀಡುತ್ತದೆ. ಅಕ್ಕಿ ಉತ್ಪಾದನೆಯ ನಷ್ಟ 10 ಮಿಲಿಯನ್ ಟನ್ ಆಗಿರಬಹುದು ಮತ್ತು ಕೆಟ್ಟ ಸಂದರ್ಭದಲ್ಲಿ ಈ ವರ್ಷ 12 ಮಿಲಿಯನ್ ಟನ್ ಆಗಬಹುದು. ಆದಾಗ್ಯೂ, ಇದು ವಿಸ್ತೀರ್ಣ ಮತ್ತು ಸರಾಸರಿ ಇಳುವರಿ ಕುಸಿತದ ಆಧಾರದ ಮೇಲೆ ಆರಂಭಿಕ ಅಂದಾಜಷ್ಟೇ ಎಂದು ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.
ಉತ್ತಮ ಮಳೆಯಾಗಿರುವ ರಾಜ್ಯಗಳಲ್ಲಿ ಇಳುವರಿ ಸುಧಾರಿಸುವುದರಿಂದ ಉತ್ಪಾದನೆಯಲ್ಲಿ ಇಳಿಕೆಯಾಗಬಹುದು. 2021-22 ಬೆಳೆ ವರ್ಷದಲ್ಲಿ (ಜುಲೈ-ಜೂನ್) ಅಕ್ಕಿಯ ಒಟ್ಟು ಉತ್ಪಾದನೆಯು ದಾಖಲೆಯ 130.29 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ. ಇದು ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆಯಾದ 116.44 ಮಿಲಿಯನ್ ಟನ್‌ಗಳಿಗಿಂತ 13.85 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ ಎಂದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸರ್ಕಾರವು ಉಚಿತ ಆಹಾರ ಧಾನ್ಯಗಳ ಕಾರ್ಯಕ್ರಮವನ್ನು ವಿಸ್ತರಿಸುತ್ತದೆಯೇ ಎಂಬ ಪ್ರಶ್ನೆಗೆ ಕಾರ್ಯದರ್ಶಿ ಪಾಂಡೆ ಉತ್ತರಿಸಲಿಲ್ಲ.