ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವದ ಕುರಿತು ಸಲ್ಲಿಸಿರುವ ಅರ್ಜಿಗಳ ಕುರಿತು ಸೆಪ್ಟೆಂಬರ್ 13ರಿಂದ ವಿಚಾರಣೆ ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಈ ವಿಷಯದ ಕುರಿತು ಒಟ್ಟು 40 ಅರ್ಜಿಗಳಿವೆ. ಈ ಎಲ್ಲದರ ಕುರಿತು ವಾದ ಮಂಡಿಸಲು ಕನಿಷ್ಠ 18 ಗಂಟೆಗಳಾದರೂ ಬೇಕು ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಸೇರಿದಂತೆ ಐವರು ನ್ಯಾಯಮುರ್ತಿಗಳ ಪೀಠವು ಅಭಿಪ್ರಾಯಪಟ್ಟಿತು.
ಎಲ್ಲಾ ವಕೀಲರಿಗೂ ಸಮಯಾವಕಾಶ ನೀಡಲಾಗುವುದು. ಸುಗಮ ವಿಚಾರಣೆಗಾಗಿ ಗುರುವಾರ ಕೆಲವು ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೇಳಿತು.
ಮೀಸಲಾತಿಯ ಕುರಿತು ದೇಶದ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ ಮಾಡಬೇಕು ಎಂದು ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.