ಪುಣೆ: ಕಂಪನಿಯ ಸಿಇಒ ಅದಾರ್ ಪೂನಾವಾಲಾ ಅವರ ಸೋಗಿನಲ್ಲಿ ಅಪರಿಚಿತ ವಂಚಕನೋರ್ವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ 1.01 ಕೋ.ರೂ.ಗಳ ಪಂಗನಾಮ ಹಾಕಿದ್ದಾನೆ. ಕಂಪನಿಯ ನಿರ್ದೇಶಕರಲ್ಲೋರ್ವರಾದ ಸತೀಶ್ ದೇಶಪಾಂಡೆಯವರಿಗೆ ಪೂನಾವಾಲಾರ ಹೆಸರಿನಲ್ಲಿ ಬಂದಿದ್ದ ವಾಟ್ಸಆಯಪ್ ಸಂದೇಶದಲ್ಲಿ ಕೆಲವು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಸೂಚಿಸಲಾಗಿತ್ತು.
ಸಂದೇಶ ಪೂನಾವಾಲಾರಿಂದಲೇ ಬಂದಿದೆ ಎಂದು ನಂಬಿದ್ದ ಕಂಪನಿಯ ಹಣಕಾಸು ವಿಭಾಗವು ಸೆ.7 ಮತ್ತು ಸೆ.8ರ ನಡುವೆ ವಿವಿಧ ವಹಿವಾಟುಗಳಲ್ಲಿ ಸೂಚಿಸಲಾಗಿದ್ದ ಬ್ಯಾಂಕ್ ಖಾತೆಗಳಿಗೆ 1.01 ಕೋ.ರೂ.ಗಳನ್ನು ವರ್ಗಾಯಿಸಿತ್ತು.
ಇಂತಹ ವರ್ಗಾವಣೆಗಳಿಗೆ ಪೂನಾವಾಲಾ ಎಂದೂ ಸೂಚಿಸಿರಲಿಲ್ಲ ಅಥವಾ ಸಂದೇಶಗಳನ್ನು ರವಾನಿಸಿರಲಿಲ್ಲ ಎನ್ನುವುದು ಗೊತ್ತಾದ ಬಳಿಕ ಕಂಪನಿಯ ಹಣಕಾಸು ವ್ಯವಸ್ಥಾಪಕರು ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಮಾಧ್ಯಮಗಳು ರವಿವಾರ ವರದಿ ಮಾಡಿವೆ.
ವಾಟ್ಸ್‌ಆಯಪ್ ಸಂದೇಶ ಕಳುಹಿಸಿದವರನ್ನು ಮತ್ತು ಹಣವನ್ನು ವರ್ಗಾಯಿಸಲಾದ ಬ್ಯಾಂಕ್ ಖಾತೆಗಳನ್ನು ಹೊಂದಿರುವವರನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.