ಪತ್ತನಂತಿಟ್ಟ: ಬೀದಿ ನಾಯಿ ಕಡಿತದಿಂದ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕಿ ಸೋಮವಾರ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಪತ್ತನಂತಿಟ್ಟ ಜಿಲ್ಲೆಯ ರಾನ್ನಿ ಮೂಲದ ಅಭಿರಾಮಿ ಮೃತ ದುರ್ದೈವಿ. ಅಭಿರಾಮಿ ಹಾಲು ಖರೀದಿಸಲು ಹೋಗುತ್ತಿದ್ದಾಗ ಬೀದಿ ನಾಯಿಗಳು ಆಕೆಯ ಕಾಲುಗಳು, ಕೈಗಳು ಮತ್ತು ಕಣ್ಣುಗಳ ಬಳಿ ಏಳು ಸ್ಥಳಗಳಲ್ಲಿ ಕಡಿದಿದ್ದವು.
ಆಕೆಯನ್ನು ಕೂಡಲೇ ಪತ್ತನಂತಿಟ್ಟ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆಯ ಸ್ಥಿತಿ ಗಂಭೀರವಾದ ನಂತರ ಆಕೆಗೆ ಮೂರು ಆ್ಯಂಟಿ-ರೇಬಿಸ್ ಲಸಿಕೆಗಳನ್ನು ನೀಡಲಾಯಿತು.
ನಂತರ ಆಕೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯ ಪ್ರಾಣ ಉಳಿಸಲಾಗಲಿಲ್ಲ. ಸಂತ್ರಸ್ತೆಯನ್ನು ವೆಂಟಿಲೇಟರ್ ಬೆಂಬಲದಲ್ಲಿಡಲಾಗಿತ್ತು.
ಆ್ಯಂಟಿ-ರೇಬಿಸ್ ಲಸಿಕೆಗಳ ಗುಣಮಟ್ಟವನ್ನು ಅಧ್ಯಯನ ಮಾಡಲು ವಿವಿಧ ಇಲಾಖೆಗಳ ತಜ್ಞರನ್ನು ಒಗ್ಗೂಡಿಸಿ ಮಂಡಳಿಯನ್ನು ಸ್ಥಾಪಿಸುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಹಿಂದೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದರು.
ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಬಾಲಕಿಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇತ್ತೀಚೆಗೆ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದು, ರಾಜ್ಯದ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಆ್ಯಂಟಿ ರೇಬಿಸ್ ಲಸಿಕೆ ಗುಣಮಟ್ಟವನ್ನು ಪರಿಶೀಲಿಸಲು ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಲಿದೆ ಎಂದಿದ್ದರು.
ಕೇರಳದಲ್ಲಿ ಈ ವರ್ಷ ಈವರೆಗೆ ಒಟ್ಟು 20 ಮಂದಿ ರೇಬೀಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ಚುಚ್ಚುಮದ್ದಿನ ಹೊರತಾಗಿಯೂ ಸಾವು ಏಕೆ ಸಂಭವಿಸಿತು ಎಂಬ ಸಾಮಾನ್ಯ ಜನರ ಪ್ರಮುಖ ಕಳವಳವನ್ನು ಗಮನಿಸಿದ ಆರೋಗ್ಯ ಸಚಿವರು ವೈದ್ಯಕೀಯ ವರದಿಗಳ ಪ್ರಕಾರ ಅವರೆಲ್ಲರಿಗೂ ಮುಖ, ಬೆರಳುಗಳು ಮುಂತಾದ ರೋಗ ಹರಡುವ ನಿರ್ಣಾಯಕ ದೇಹದ ಭಾಗಗಳಿಗೆ ನಾಯಿ ಕಡಿದಿತ್ತು ಎಂದು ಹೇಳಿದರು.