ನವದೆಹಲಿ: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2021ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 191 ರಾಷ್ಟ್ರಗಳ ಪೈಕಿ ಭಾರತ 132 ನೇ ಸ್ಥಾನ ಪಡೆದುಕೊಂಡಿದೆ. 2020ರಲ್ಲಿ ಭಾರತ 189 ರಾಷ್ಟ್ರಗಳ ಪೈಕಿ 131ನೇ ಸ್ಥಾನ ಪಡೆದಿತ್ತು.
2020 ರ ವರದಿಯಲ್ಲಿ ಭಾರತದ ಮೌಲ್ಯ 0.645ರಷ್ಟಿತ್ತು. ಜಾಗತಿಕ ಪ್ರವೃತ್ತಿಗಳಂತೆಯೇ, ಭಾರತದ ವಿಷಯದಲ್ಲಿ 2019 ರಲ್ಲಿ 0.645 ಇದ್ದ ಎಚ್‌ಡಿಐ ಮೌಲ್ಯ 2021 ರಲ್ಲಿ 0.633 ರಷ್ಟಿದ್ದು, ಜೀವಿತಾವಧಿ ನಿರೀಕ್ಷೆ 69.7 ರಿಂದ 67.2 ಕ್ಕೆ ಕುಸಿಯಲು ಕಾರಣವಾಗಿದೆ.ಮಾನವ ಅಭಿವೃದ್ಧಿಯನ್ನು ಒಂದು ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಸರಾಸರಿ ಆದಾಯದ ಮೇಲೆ ಅಳೆಯಲಾಗುತ್ತದೆ. ಕೊರೊನಾ ಐದು ವರ್ಷಗಳ ಪ್ರಗತಿಯನ್ನು ಕುಂಠಿತಗೊಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವದಾದ್ಯಂತ ಮಾನವ ಅಭಿವೃದ್ಧಿಯು 32 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಗಿತಗೊಂಡಿದೆ ಎಂದು ವರದಿಯಲ್ಲಿ ತೋರಿಸಲಾಗಿದೆ. 2019 ರಲ್ಲಿ 72.8 ವರ್ಷಗಳಿದ್ದ ಜೀವಿತಾವಧಿ 2021 ರಲ್ಲಿ 71.4 ವರ್ಷಗಳಿಗೆ ಕಡಿತಗೊಂಡಿದೆ.
ವಿಶ್ವ ಒಂದರ ಹಿಂದೊಂದರಂತೆ ಬಿಕ್ಕಟ್ಟುಗಳಿಗೆ ಈಡಾಗುತ್ತಿದ್ದು, ಜೀವನ ವೆಚ್ಚ ಮತ್ತು ಇಂಧನ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂದು ಯುಎನ್‌ಡಿಪಿಯ ನಿರ್ವಾಹಕರಾದ ಅಚಿಮ್ ಸ್ಟೈನರ್ ಹೇಳಿದ್ದಾರೆ. ಮಾನವ ಅಭಿವೃದ್ಧಿಯಲ್ಲಿ ಭಾರತದ ಕುಸಿತವು ಬಿಕ್ಕಟ್ಟುಗಳಿಂದ ಪ್ರಭಾವಿತವಾಗಿದೆ. ಆದರೆ 2019 ಕ್ಕೆ ಹೋಲಿಸಿದರೆ, ಮಾನವ ಅಭಿವೃದ್ಧಿಯ ಮೇಲಿನ ಅಸಮಾನತೆಯ ಪ್ರಭಾವ ಕಡಿಮೆಯಾಗಿದೆ ಎಂದು ಭಾರತದಲ್ಲಿನ ಯುಎನ್ ಡಿಪಿ ಪ್ರತಿನಿಧಿ ಶೊಕೊ ನೊಡಾ ಹೇಳಿದ್ದಾರೆ. ಬಾಂಗ್ಲಾದೇಶ, ಭೂತಾನ್ ನಂತರ ದಕ್ಷಿಣ ಏಷ್ಯಾದ ರಾಷ್ಟ್ರಗಳ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿಯಾಗಿರುವುದಾಗಿ ವರದಿ ಹೇಳಿದೆ.