ನವದೆಹಲಿ: ದೇಶದಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಹಾಗೂ ಉನ್ನತೀಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಶಿಕ್ಷಕರ ದಿನದ ಪ್ರಯುಕ್ತ ಈ ಹೊಸ ಕಾರ್ಯಕ್ರಮವನ್ನು ಮೋದಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಶಿಕ್ಷಕರ ದಿನದಂದು ಹೊಸ ಕಾರ್ಯಕ್ರಮವೊಂದನ್ನು ಘೋಷಿಸಲು ನಾನು ಸಂತಸಪಡುತ್ತೇನೆ.
ರೈಸಿಂಗ್ ಇಂಡಿಯಾ (ಪಿಎಂ-ಶ್ರೀ) ಯೋಜನೆ ಅಡಿಯಲ್ಲಿ ಭಾರತದಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣಗೊಳಿಸಲಾಗುವುದು. ಈ ಮಾದರಿ ಶಾಲೆಗಳಲ್ಲಿ ಎನ್‌ಇಪಿಯ ಪೂರ್ಣ ಅನುಷ್ಠಾನ ಮಾಡಲಾಗುವುದು' ಎಂದು ತಿಳಿಸಿದ್ದಾರೆ.
'ಪಿಎಂ-ಶ್ರೀ' ಶಾಲೆಗಳು ಶಿಕ್ಷಣವನ್ನು ನೀಡುವ ಆಧುನಿಕ ಹಾಗೂ ಸಮಗ್ರ ವಿಧಾನಗಳನ್ನು ಹೊಂದಿರುತ್ತವೆ. ಇಲ್ಲಿ ಆವಿಷ್ಕಾರ ಆಧಾರಿತ, ಕಲಿಕಾ ಕೇಂದ್ರಿತ ಬೋಧನೆಗೆ ಒತ್ತು ನೀಡಲಾಗುವುದು. ಇತ್ತೀಚಿನ ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್‌ರೂಮ್ ಹಾಗೂ ಕ್ರೀಡೆಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಎನ್‌ಇಪಿ ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸಿದೆ. 'ಪಿಎಂ-ಶ್ರೀ' ಶಾಲೆಗಳು ಎನ್‌ಇಪಿ ಮೂಲಕ ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಿವೆ ಎಂಬುದು ನನಗೆ ಖಚಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.