ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೇ ಮೊದಲನೇ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ ಚಿತ್ರವಾದ ಬ್ರಹ್ಮಾಸ್ತ್ರ ಇದೇ ಶುಕ್ರವಾರದಂದು ಭರ್ಜರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಯಿತು. ಅಯಾನ್ ಮುಖರ್ಜಿ ನಿರ್ದೇಶನವಿರುವ ಈ ಚಿತ್ರ ಬಿಡುಗಡೆಗೂ ಮುನ್ನ ನಿರೀಕ್ಷೆ ಹುಟ್ಟುಹಾಕುವುದರ ಜತೆಗೆ ವಿರೋಧವನ್ನು ಕೂಡ ಎದುರಿಸಿತ್ತು.
ಈ ಹಿಂದಿನ ಬಾಲಿವುಡ್ ಚಿತ್ರಗಳ ಹಾಗೆ ಈ ಚಿತ್ರದ ವಿರುದ್ಧವೂ ಸಹ ಬಾಯ್ಕಾಟ್ ಟ್ರೆಂಡ್ ನಡೆಯಿತು. ಇನ್ನು ಚಿತ್ರ ಬಿಡುಗಡೆಯಾದ ನಂತರ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿದವು. ಕೆಲವರು ಚಿತ್ರ ಓಕೆ ಓಕೆ, ಒಮ್ಮೆ ನೋಡಬಹುದು ಅಷ್ಟೆ ಎಂದರೆ, ಇನ್ನೂ ಕೆಲ ಪ್ರೇಕ್ಷಕರು ಚಿತ್ರದಲ್ಲಿ ಕಂಟೆಂಟ್ ಇಲ್ಲ ಬರೀ ವಿ ಎಫ್ ಎಕ್ಸ್ ಅತಿರೇಕವಾಗಿದೆ ಎಂದು ಚಿತ್ರವನ್ನು ಒಪ್ಪಲಿಲ್ಲ. ಇನ್ನೂ ಕೆಲ ಪ್ರೇಕ್ಷಕರು ಹುಸಿ ವಿಮರ್ಶೆಗಳಿಗೆ ಕಿವಿಗೊಡಬೇಡಿ, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ, ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸಿ ಎಂದು ಚಿತ್ರವನ್ನು ಮೆಚ್ಚಿಕೊಂಡರು.
ಹೀಗೆ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ ಬ್ರಹ್ಮಾಸ್ತ್ರ ಚಿತ್ರ ಸಾಮಾನ್ಯ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಬ್ರಹ್ಮಾಸ್ತ್ರ ಎರಡೇ ದಿನಕ್ಕೆ 160 ಕೋಟಿ ಬಾಚಿದೆ ಎಂಬ ವಿಷಯವನ್ನು ಸ್ವತಃ ಚಿತ್ರದ ನಿರ್ದೇಶಕ ಆಯನ್ ಮುಖರ್ಜಿ ಅವರೇ ಬಿಚ್ಚಿಟ್ಟಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ಪೋಸ್ಟರ್ ಹಂಚಿಕೊಂಡ ಮುಖರ್ಜಿ
ಬ್ರಹ್ಮಾಸ್ತ್ರ ಚಿತ್ರದ ನಿರ್ದೇಶಕ ಆಯನ್ ಮುಖರ್ಜಿ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಬ್ರಹ್ಮಾಸ್ತ್ರ ಮೊದಲ 2 ದಿನಗಳಲ್ಲಿ 160 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿಸಿದ್ದಾರೆ. ತಮ್ಮ ಸಿನಿಮಾ ಮೇಲೆ ಇಷ್ಟು ದೊಡ್ಡ ಮಟ್ಟದ ಪ್ರೀತಿ ತೋರಿಸುತ್ತಿರುವ ಸಿನಿಪ್ರೇಕ್ಷಕರಿಗೆ ಇದೇ ವೇಳೆ ಅಯನ್ ಮುಖರ್ಜಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಮೊದಲ ದಿನ 75 ಕೋಟಿ ಎಂದು ಪೋಸ್ಟ್ !
ಆಯನ್ ಮುಖರ್ಜಿ ಬ್ರಹ್ಮಾಸ್ತ್ರ ಮೊದಲ ದಿನ 75 ಕೋಟಿ ಕಲೆಕ್ಷನ್ ಮಾಡಿದೆ ಎಂದು ನಿನ್ನೆಯಷ್ಟೇ ಪೋಸ್ಟರ್ ಹಂಚಿಕೊಂಡಿದ್ದರು. ಈ ಮೂಲಕ ಬ್ರಹ್ಮಾಸ್ತ್ರ ಮೊದಲ ದಿನ 75 ಕೋಟಿ ಮತ್ತು ಎರಡನೇ ದಿನ 85 ಕೋಟಿ ರೂಪಾಯಿಗಳನ್ನು ಕಲೆಕ್ಟ್ ಮಾಡಿದೆ ಎಂಬುದನ್ನು ಆಯನ್ ಮುಖರ್ಜಿ ಬಿಚ್ಚಿಟ್ಟಿದ್ದಾರೆ. ನಿನ್ನೆ ಕರಣ್ ಜೋಹರ್ ಕೂಡ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬ್ರಹ್ಮಾಸ್ತ್ರ ಮೊದಲ ದಿನ 75 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಪೋಸ್ಟರ್ ಹಂಚಿಕೊಂಡಿದ್ದರು.
ಈ ಪೋಸ್ಟ್ ಕುರಿತು ಮಿಶ್ರ ಪ್ರತಿಕ್ರಿಯೆ
ಅಯಾನ್ ಮುಖರ್ಜಿ ಹಂಚಿಕೊಂಡಿರುವ ಈ ಪೋಸ್ಟರ್ ಕುರಿತು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಚಿತ್ರತಂಡಕ್ಕೆ ಶುಭ ಕೋರಿದ್ದರೆ, ಇನ್ನೂ ಕೆಲವರು ಚಿತ್ರ ಎಲ್ಲಾ ಕಡೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ವೇಳೆ ಇಷ್ಟು ದೊಡ್ಡ ಮೊತ್ತ ಎಂದರೆ ಜನ ನಂಬುತ್ತಾರಾ, ಪ್ರಚಾರಕ್ಕಾಗಿ ಹೀಗೆಲ್ಲ ಹುಸಿ ಕಲೆಕ್ಷನ್ ರಿಪೋರ್ಟ್ ಕೊಡಬೇಡಿ ಎಂದು ಆಯನ್ ಮುಖರ್ಜಿ ಅವರ ಕಾಲೆಳೆದಿದ್ದಾರೆ.
ಬಾಕ್ಸಾಫೀಸ್ ಪರಿಣಿತರು ಹೇಳೋದೇನು?
ಚಿತ್ರತಂಡ ಬ್ರಹ್ಮಾಸ್ತ್ರ ಮೊದಲ ದಿನ 75 ಕೋಟಿ ಮತ್ತು ಎರಡನೇ ದಿನ 85 ಕೋಟಿ ಕಲೆಕ್ಷನ್ ಮಾಡಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದರೆ, ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಟ್ರ್ಯಾಕರ್ಸ್ ಮಾತ್ರ ಬ್ರಹ್ಮಾಸ್ತ್ರ ಮೊದಲನೇ ದಿನ 36.42 ಕೋಟಿ ಮತ್ತು ಎರಡನೇ ದಿನ 41.36 ಕೋಟಿ ಕಲೆಹಾಕಿದೆ ಎಂದಿದ್ದಾರೆ. ಈ ಮೂಲಕ ಬ್ರಹ್ಮಾಸ್ತ್ರ ಮೊದಲೆರಡು ದಿನಗಳಲ್ಲಿ 77.78 ಕೋಟಿ ಕಲೆಕ್ಷನ್ ಮಾಡಿದೆ ಅಷ್ಟೆ ಎಂದು ರಿಪೋರ್ಟ್ ನೀಡುತ್ತಿದ್ದಾರೆ. ಸದ್ಯ ಸಿನಿಪ್ರೇಕ್ಷಕರು ಈ 2 ವರದಿಗಳಲ್ಲಿ ಚಿತ್ರತಂಡ ಹೇಳುತ್ತಿರುವುದು ನಿಜವಾ ಅಥವಾ ಬಾಕ್ಸಾಫೀಸ್ ಪರಿಣಿತರು ಹೇಳುತ್ತಿರುವುದು ನಿಜಾನಾ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.