ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಅಲ್ಲಿಯ ಭಾರೀ ಶಸ್ತ್ರಸಜ್ಜಿತ ಬಂಡುಕೋರರ ಗುಂಪು ಕರೇನ್ ನ್ಯಾಷನಲ್ ಲಿಬರೇಷನ್ ಆರ್ಮಿ (ಕೆಎನ್‌ಎಲ್‌ಎ)ಯು ಮ್ಯಾನ್ಮಾರ್-ಥಾಯ್ಲೆಂಡ್ ಗಡಿ ಪ್ರದೇಶದಲ್ಲಿ ಕನಿಷ್ಠ 150 ಭಾರತೀಯ ಐಟಿ ವೃತ್ತಿಪರರನ್ನು ತನ್ನ ವಶದಲ್ಲಿಟ್ಟುಕೊಂಡಿದೆ.
ಅವರನ್ನು ಸಂಘಟಿತ ಸೈಬರ್ ಅಪರಾಧಗಳನ್ನು ಎಸಗುತ್ತಿರುವ ಮಲೇಶಿಯನ್- ಚೈನೀಸ್ ಗ್ಯಾಂಗೊಂದಕ್ಕೆ ಬಳಸಿಕೊಳ್ಳು ತ್ತಿದೆ ಎಂದು ಶಂಕಿಸಲಾಗಿದೆ.
ಕೆಎನ್‌ಎಲ್‌ಎ ನಿಯಂತ್ರಣದಲ್ಲಿ ರುವ ಮ್ಯಾನ್ಮಾರ್‌ನ ಕರೇನ್ ರಾಜ್ಯದ ಮ್ಯಾವಡ್ಡಿ ಜಿಲ್ಲೆಯಲ್ಲಿ ಇತ್ತೀಚೆಗೆ ಬಂಡುಕೋರರು ಮತ್ತು ಮ್ಯಾನ್ಮಾರ್ ಸೇನೆಯ ನಡುವೆ ಆಗಾಗ್ಗೆ ಗುಂಡಿನ ಕಾಳಗಗಳು ನಡೆದಿವೆ ಎಂದು ಭಾರತೀಯ ಭದ್ರತಾ ಏಜೆನ್ಸಿಗಳಲ್ಲಿಯ ಮೂಲಗಳು ತಿಳಿಸಿವೆ. ಕೆಎನ್‌ಎಲ್‌ಎ ಮತ್ತು ಇನ್ನೊಂದು ಬಂಡುಕೋರ ಗುಂಪು ಅರಕನ್ ಆರ್ಮಿ ಚೀನಾದಿಂದ ಭಾರೀ ಶಸ್ತ್ರಾಸ್ತ್ರಗಳನ್ನು ತರಲು ಸಾಂಪ್ರದಾಯಿಕವಾಗಿ ಮ್ಯಾವಡ್ಡಿ ಮಾರ್ಗವನ್ನೇ ಬಳಸುತ್ತಿವೆ.
ತಮಿಳುನಾಡು ಮತ್ತು ಕೇರಳದವರೇ ಹೆಚ್ಚಿನ ಸಂಖ್ಯೆಯಲ್ಲಿ ರುವ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಉದ್ಯೋಗ ಜಾಲದಲ್ಲಿ ಸಿಕ್ಕಿಕೊಂಡಿದ್ದರು. ದುಬೈನ ಕೆಲವು ಚೀನಿ ರಾಷ್ಟ್ರೀಯರು ನಡೆಸುತ್ತಿದ್ದ ನಾಲ್ಕು ಕಂಪೆನಿಗಳು ಭಾರತೀಯ ಟೆಕ್ಕಿಗಳನ್ನು ಕ್ರಿಪ್ಟೊ ಕರೆನ್ಸಿ ಮತ್ತು ಇತರ ಸಂಬಂಧಿತ ಅಪರಾಧಗಳು ಸೇರಿದಂತೆ ಸೈಬರ್ ವಂಚನೆಗಳಲ್ಲಿ ಬಲವಂತದಿಂದ ತೊಡಗಿಸಿದ್ದರು. ಜುಲೈನಲ್ಲಿ ವಂಚನೆಯು ಬೆಳಕಿಗೆ ಬಂದ ಬಳಿಕ ಇಂತಹ 32 ಭಾರತೀಯರನ್ನು ರಕ್ಷಿಸಲಾಗಿದೆ,ಇತರರು ತಮ್ಮನ್ನು ಬಿಡಿಸಿಕೊಳ್ಳಲು ಭಾರೀ ಒತ್ತೆಹಣವನ್ನು ನೀಡಿದ್ದರು ಎನ್ನಲಾಗಿದೆ.
ಈ ಟೆಕ್ಕಿಗಳ ರಕ್ಷಣೆಗೆ ನೆರವಾಗಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ಗಳಲ್ಲಿ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ, ಆದರೆ ನಿಖರವಾದ ತಳಮಟ್ಟದ ಮಾಹಿತಿಗಳ ಕೊರತೆಯು ಈ ಟೆಕ್ಕಿಗಳನ್ನು ರಕ್ಷಿಸುವ ಅಧಿಕಾರಿಗಳ ಪ್ರಯತ್ನಗಳನ್ನು ವಿಳಂಬಿಸುತ್ತಿದೆ ಎನ್ನಲಾಗಿದೆ.