ನವದೆಹಲಿ: ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳಿಗೆ ಅಗತ್ಯ ಹಾರ್ಡ್‌ವೇರ್, ಸಾಫ್ಟ್‌ವೇರ್ ಹಾಗೂ ಬಿಡಿಭಾಗಗಳನ್ನು ಪೂರೈಸಲು ಅಮೆರಿಕ ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಭಾರತ ಬುಧವಾರ ಕಳವಳ ವ್ಯಕ್ತಪಡಿಸಿದೆ.
ಈ ಸಂಬಂಧ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ನಡೆಸಿದ ದೂರವಾಣಿ ಮಾತುಕತೆ ವೇಳೆ ಭಾರತದ ಕಳವಳ ತಿಳಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
'ಲಾಯ್ಡ್ ಆಸ್ಟಿನ್ ಅವರ ಜತೆಗೆ ನಡೆಸಿದ ಆಪ್ತ ಮತ್ತು ಫಲಪ್ರದ ಸಂಭಾಷಣೆಯಲ್ಲಿ ನಾವು ವ್ಯೂಹಾತ್ಮಕ ಕಾರ್ಯತಂತ್ರದ ಹಿತಾಸಕ್ತಿ, ರಕ್ಷಣಾ ಮತ್ತು ಭದ್ರತಾ ಸಹಕಾರ ಹೆಚ್ಚಿಸುವ ಬಗ್ಗೆ ಚರ್ಚಿಸಿದ್ದೇವೆ' ಎಂದು ಸಿಂಗ್ ಹೇಳಿದರು.
ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳಿಗೆ ಅಗತ್ಯವಿರುವ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಬಿಡಿಭಾಗಗಳನ್ನು ಪೂರೈಸಲು 450 ದಶಲಕ್ಷ ಡಾಲರ್ ಮೌಲ್ಯದ ವಿದೇಶಿ ಮಿಲಿಟರಿ ಮಾರಾಟ (ಎಫ್‌ಎಂಎಸ್) ಒದಗಿಸಲು ಅಮೆರಿಕ ಯೋಜಿಸಿದೆ.