ನವದೆಹಲಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದ 1,719 ದೂರುಗಳು ಈ ವರ್ಷ ಇದುವರೆಗೆ ಲೋಕಪಾಲದಲ್ಲಿ ದಾಖಲಾಗಿದ್ದು, ಇವುಗಳಲ್ಲಿ 136 ಪ್ರಕರಣಗಳನ್ನು ತನಿಖೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
2022-23ರ ಸಾಲಿನಲ್ಲಿ (2022 ಆಗಸ್ಟ್ 21ರ ವರೆಗೆ) ಒಟ್ಟು ದೂರುಗಳ ಪೈಕಿ 134 ದೂರುಗಳು ಮಾತ್ರ ನಿಗದಿತ ನಮೂನೆಯಲ್ಲಿ ಸಲ್ಲಿಕೆಯಾಗಿವೆ.
ಉಳಿದ 1,585 ದೂರುಗಳು ನಿಗದಿತ ನಮೂನೆಯಲ್ಲಿ ಸಲ್ಲಿಕೆಯಾಗಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಲೋಕಪಾಲ ಕಚೇರಿ ಮೂಲಗಳು ತಿಳಿಸಿವೆ.
ನಿಗದಿತ ನಮೂನೆಯಲ್ಲಿ ಸಲ್ಲಿಸಿದ್ದ 133 ದೂರುಗಳನ್ನು ಮತ್ತು ನಿಗದಿತ ನಮೂನೆಯಲ್ಲಿ ಸಲ್ಲಿಸದ ಮೂರು ದೂರುಗಳನ್ನು ತನಿಖೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.