ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾರ್ವಜನಿಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕ್ರೀಡಾಪಟುಗಳು ಹಾಗೂ ಇತರರು ನೀಡಿರುವ 1,200ಕ್ಕೂ ಅಧಿಕ ಉಡುಗೊರೆಗಳ ಹರಾಜು ಪ್ರಕ್ರಿಯೆಯು ಇದೇ 17ರಿಂದ ಅಕ್ಟೋಬರ್ 2ರವರೆಗೆ ಆನ್‌ಲೈನ್‌ನಲ್ಲಿ ನಡೆಯಲಿದೆ.
'pmmementos.gov.in ವೆಬ್ ಪೋರ್ಟಲ್ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೀಡಿರುವ ರಾಣಿ ಕಮಲಾಪತಿಯ ವಿಗ್ರಹ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊಟ್ಟಿರುವ ಹನುಮಾನ್ ವಿಗ್ರಹ ಮತ್ತು ಸೂರ್ಯನ ಕಲಾಕೃತಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ನೀಡಿರುವ ತ್ರಿಶೂಲ ಸೇರಿದಂತೆ ₹100 ರಿಂದ ₹10 ಲಕ್ಷದವರೆಗಿನ ಮೂಲಬೆಲೆಯ ಹಲವು ಉಡುಗೊರೆಗಳನ್ನು ಹರಾಜಿನಲ್ಲಿಡಲಾಗಿದೆ. ಇದರಿಂದ ಸಂಗ್ರಹವಾದ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡಲಾಗುತ್ತದೆ' ಎಂದು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ಮಹಾನಿರ್ದೇಶಕ ಅದ್ವೈತ್ ಗಡನಾಯಕ್ ಭಾನುವಾರ ಮಾಹಿತಿ ನೀಡಿದ್ದಾರೆ.