ಚಂಡೀಗಡ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಪಂಜಾಬ್ ಲೋಕ ಕಾಂಗ್ರೆಸ್‌ನ (ಪಿಎಲ್‌ಸಿ) ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸೆ.19ರಂದು (ಸೋಮವಾರ) ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಿಎಲ್‌ಸಿಯ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.
ಸಿಂಗ್ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಸೋಮವಾರ ನವದೆಹಲಿಯಲ್ಲಿ ಬಿಜೆಪಿಗೆ ಸೇರಲಿದ್ದಾರೆ. ಸಿಂಗ್ ಅವರು ಹೊಸದಾಗಿ ಸ್ಥಾಪಿಸಿರುವ ಪಿಎಲ್‌ಸಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಪಿಎಲ್‌ಸಿಯನ್ನು ಸೇರಿದ್ದ ಏಳು ಮಾಜಿ ಶಾಸಕರು ಹಾಗೂ ಒಬ್ಬ ಸಂಸದರು ಸಿಂಗ್ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬಳಿಕ ಚಂಡೀಗಡದಲ್ಲಿ ನಡೆಯಲಿರುವ ಪ್ರತ್ಯೇಕ ಕಾರ್ಯಕ್ರಮದಲ್ಲಿ ಪಿಎಲ್‌ಸಿ ಜಿಲ್ಲಾ ಅಧ್ಯಕ್ಷರು ಬಿಜೆಪಿಗೆ ಸೇರಲಿದ್ದಾರೆ ಎಂದು ಪಿಎಲ್‌ಸಿ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲಿಯಾವಾಲ್ ತಿಳಿಸಿದ್ದಾರೆ.
ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಅನಿರೀಕ್ಷಿತವಾಗಿ ನಿರ್ಗಮಿಸಿದ ಬಳಿಕ ಕಾಂಗ್ರೆಸ್ ತೊರೆದಿದ್ದರು. ಬಳಿಕ ಅವರು ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದ್ದರು.
ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅಮರಿಂದರ್ ಸಿಂಗ್ ಅವರು ಈಚೆಗಷ್ಟೇ ಲಂಡನ್‌ನಿಂದ ಹಿಂತಿರುಗಿದ್ದಾರೆ. ಅಲ್ಲಿಂದ ಬಂದ ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಸೆ.12ರಂದು ಶಾ ಅವರೊಂದಿಗಿನ ಭೇಟಿಯಲ್ಲಿ ರಾಷ್ಟ್ರೀಯ ಭದ್ರತೆ, ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ- ಭಯೋತ್ಪಾದನೆಯ ಪ್ರಕರಣಗಳು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿ, ಭವಿಷ್ಯದ ಮಾರ್ಗಸೂಚಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅವರು ಚರ್ಚೆ ನಡೆಸಿದ್ದರು.
ಸಿಂಗ್ ಅವರು ಲಂಡನ್‌ಗೆ ತೆರಳುವ ಮುನ್ನವೇ ಬಿಜೆಪಿ ಸೇರುವ ಕುರಿತು ಇಂಗಿತ ವ್ಯಕ್ತಪಡಿಸಿದ್ದರು ಎಂದು ಪಂಜಾಬ್‌ನ ಹಿರಿಯ ಬಿಜೆಪಿ ಮುಖಂಡ ಹರ್ಜಿತ್ ಸಿಂಗ್ ಗ್ರೇವಾಲ್ ಜುಲೈನಲ್ಲಿಯೇ ತಿಳಿಸಿದ್ದರು. ಲಂಡನ್‌ನಿಂದ ಬಂದ ಬಳಿಕ ಪಿಎಲ್‌ಸಿಯನ್ನು ಬಿಜೆಪಿಯ ಜತೆ ವಿಲೀನಗೊಳಿಸುವ ಕುರಿತು ಘೋಷಸುವರು ಎಂದೂ ಅವರು ತಿಳಿಸಿದ್ದರು.