ನವದೆಹಲಿ: ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ-ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶುಕ್ರವಾರ ಬೆಳಗ್ಗೆ ಪ್ರಕಟಿಸಿದೆ. ಒಟ್ಟು 19,865 ಅಭ್ಯರ್ಥಿಗಳು 30 ವಿಷಯಗಳಲ್ಲಿ ಶೇಕಡ 100 ಅಂಕ ಗಳಿಸಿದ್ದಾರೆ.
ಅಭ್ಯರ್ಥಿಗಳು ಸಿಯುಇಟಿ-ಯುಜಿ ಅಧಿಕೃತ ವೆಬ್‌ಸೈಟ್ cuet.samarth.ac.in ನಿಂದ ಅಂಕ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ದೇಶದಾದ್ಯಂತ 91 ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಜುಲೈನಲ್ಲಿ ಪ್ರಾರಂಭವಾಗಿದ್ದ 6 ಹಂತಗಳ ಪರೀಕ್ಷೆ ಆಗಸ್ಟ್ 30 ರಂದು ಮುಕ್ತಾಯಗೊಂಡಿತ್ತು.
ಪರೀಕ್ಷೆ ಫಲಿತಾಂಶ ಗುರುವಾರ ಮಧ್ಯಾಹ್ನವೇ ಪ್ರಕಟವಾಗಬೇಕಿತ್ತು. ಆದರೆ, ಭಾರಿ ಪ್ರಮಾಣದ ದತ್ತಾಂಶಗಳ ಕಾರಣಗಳಿಂದಾಗಿ ಪರೀಕ್ಷೆ ಫಲಿತಾಂಶ ವಿಳಂಬಗೊಂಡಿದೆ ಎಂದು ಎನ್‌ಟಿಎ ಹೇಳಿದೆ.
ಸಿಯುಇಟಿ-ಯುಜಿ ಫಲಿತಾಂಶದ ಆಧಾರದ ಮೇಲೆ, ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಮ್ಮ ಕಟ್-ಆಫ್ ಪಟ್ಟಿಯನ್ನು ಸಿದ್ಧಪಡಿಸುತ್ತವೆ. ಕಟ್-ಆಫ್ ಪಟ್ಟಿಯ ಆಧಾರದ ಮೇಲೆ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ.
ಎಲ್ಲಾ ಆರು ಹಂತದ ಪರೀಕ್ಷೆಗಳಿಗೆ ಒಟ್ಟು 14.90 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಸುಮಾರು ಶೇ 60 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.
ಭಾರತದಲ್ಲಿ 239 ನಗರಗಳ 444 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ಭಾರತವನ್ನು ಹೊರತುಪಡಿಸಿ, ಮಸ್ಕತ್, ರಿಯಾದ್, ದುಬೈ, ಮನಾಮ, ದೋಹಾ, ಕಠ್ಮಂಡು, ಶಾರ್ಜಾ, ಸಿಂಗಾಪುರ್ ಮತ್ತು ಕುವೈತ್‌ನಲ್ಲಿಯೂ ಪರೀಕ್ಷೆ ನಡೆದಿತ್ತು.