ಎಲ್ಲಿಯಾದರೂ ರೇಡ್ ಆಗಿದೆ ಅಂದ್ರೆ ಅದು ಐಟಿ ಆಗಿರುತ್ತಿತ್ತು. ಈಗ ಇಡಿ ಅಥವಾ ಜಾರಿ ನಿರ್ದೇಶನಾಲಯದಿಂದ ದಾಳಿಗಳಾಗುವುದನ್ನು ಬಹುತೇಕ ನಿತ್ಯ ಸುದ್ದಿಯಲ್ಲಿ ಕಾಣುತ್ತೇವೆ. ಕಳೆದ ಏಳೆಂಟು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ ಗರಿಗೆದರಿ ನಿಂತಂತಿದೆ.
ಭಾನುವಾರ(ಸೆ.11) ಕೋಲ್ಕತಾ ಮೂಲದ ಉದ್ಯಮಿಯೊಬ್ಬರ ಮನೆಯಲ್ಲಿ ಇಡಿ ಅಧಿಕಾರಿಗಳು 17 ಕೋಟಿಗೂ ಹೆಚ್ಚು ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಇದು ಯಾವುದೋ ಮೊಬೈಲ್ ಗೇಮಿಂಗ್ ಆಯಪ್‌ಗೆ ಸಂಬಂಧಿಸಿದ ವಂಚನೆಯ ಪ್ರಕರಣವಾಗಿದೆ. ಕಳೆದ ಮೂರು ತಿಂಗಳಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ರೇಡ್‌ಗಳಲ್ಲಿ ನೂರು ಕೋಟಿಗೂ ಹೆಚ್ಚು ಹಣವನ್ನು ಜಫ್ತಿ ಮಾಡಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳ ಸರಕಾರದಲ್ಲಿ ಸಚಿವರಾಗಿದ್ದ ಪಾರ್ಥ ಚಟರ್ಜಿಯ ಆಪ್ತೆ ಎನ್ನಲಾದ ಅರ್ಪಿತಾ ಮುಖರ್ಜಿಯ ಮನೆಗಳಲ್ಲಿ ಇಡಿ ಅಧಿಕಾರಿಗಳು 50 ಕೋಟಿಯಷ್ಟು ನಗದು ಹಣವನ್ನು ಪತ್ತೆಹಚ್ಚಿ ಜಫ್ತಿ ಮಾಡಿದ್ದು ನೆನಪಿರಬಹುದು. ಇದು ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಗರಣ. ಅರ್ಪಿತಾ ಮನೆಗಳಲ್ಲಿ ಸಿಕ್ಕ ಹಣ ಪಾರ್ಥ ಚಟರ್ಜಿಯದ್ದು, ಅಪರಾಧದಿಂದ ದೊರೆತ ಹಣ ಅದು ಎಂಬುದು ಇಡಿ ಅರೋಪ.
ಒಂದು ರೇಡ್‌ನಲ್ಲಿ 50 ಕೋಟಿ ರೂ ನಗದ ಇಡಿಗೆ ಸಿಕ್ಕಿದ್ದು ಅದೇ ಮೊದಲು. ಆ ಹಣವನ್ನು ಮೆಷೀನ್‌ಗಳಲ್ಲಿ ಎಣಿಸುವುದಕ್ಕೇ ಇಡೀ ದಿನ ಬೇಕಾಯಿತಂತೆ. ಬ್ಯಾಂಕ್ ಅಧಿಕಾರಿಗಳೂ ಈ ಹಣ ಎಣಿಸುವಷ್ಟರಲ್ಲಿ ಹೈರಾಣಾಗಿ ಹೋಗಿದ್ದರಂತೆ.
ಜಾರ್ಖಂಡ್ ಗಣಿಗಾರಿಕೆ ಹಗರಣದಲ್ಲೂ ಇಡಿ ಅಧಿಕಾರಿಗಳ ತಂಡಕ್ಕೆ 20 ಈವರೆಗೆ ಅದೆಷ್ಟು ಹಣ ಸಿಕ್ಕಿರಬಹುದು? ಆ ಹಣವನ್ನು ಎಲ್ಲಿ ಇಟ್ಟಿರಬಹುದು?
ಎಂಟು ವರ್ಷದಲ್ಲಿ 27 ಪಟ್ಟು ಹೆಚ್ಚಳ
ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಜಾರಿ ನಿರ್ದೇಶನಾಲಯದಿಂದ ದಾಳಿಗಳಾಗುವುದು ಗಣನೀಯವಾಗಿ ಹೆಚ್ಚಾಗಿದೆ. 2004ರಿಂದ 2014ರ ಅವಧಿಗೆ ಹೋಲಿಸಿದರೆ 2014-2022ರ ಅವಧಿಯಲ್ಲಿ ಇಡಿ ದಾಳಿ 27 ಪಟ್ಟು ಹೆಚ್ಚಾಗಿದೆ. ಹಿಂದಿನ ಅವಧಿಯಲ್ಲಿ 112 ಇಡಿ ಸರ್ಚ್‌ಗಳಾಗಿದ್ದರೆ 2014ರಿಂದ ಈಚೆಗೆ 3010 ಇಡಿ ರೇಡ್‌ಗಳಾಗಿವೆ.
2022 ಮಾರ್ಚ್ 31ರವರೆಗಿನ ಅಂಕಿ ಅಂಶದ ಪ್ರಕಾರ ಇಡಿ ಜಫ್ತಿ ಮಾಡಿಟ್ಟುಕೊಂಡಿರುವವರ ಆಸ್ತಿಯ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಂತೆ. ಇದರಲ್ಲಿ 57,000 ಕೋಟಿ ರೂ ಹಣವು ಬ್ಯಾಂಕ್ ವಂಚನೆ ಇತ್ಯಾದಿ ಪ್ರಕರಣಗಳದ್ದಾಗಿದೆ.
ಆದರೆ, ಇಡಿಯಿಂದ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಬಹಳ ಕಡಿಮೆ. ಕಳೆದ 17 ವರ್ಷಗಳಲ್ಲಿ ಪಿಎಂಎಲ್‌ಎ ಕಾಯ್ದೆ ಅಡಿ ಒಟ್ಟು 5,422 ಪ್ರಕರಣಗಳು ದಾಖಲಾಗಿವೆ. ಆದರೆ, ಅಪರಾಧ ಸಾಬೀತಾದ ಪ್ರಕರಣ ಕೇವಲ 25 ಮಾತ್ರವಂತೆ. ಕೆಲ ವರದಿಗಳ ಪ್ರಕಾರ ಈಗ ನೂರಾರು ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ.
ಜಪ್ತಿ ಮಾಡಿದ ಹಣ ಏನಾಗುತ್ತೆ?
ಜಾರಿ ನಿರ್ದೇಶನಾಲಯ ಈವರೆಗೆ ಜಪ್ತಿ ಮಾಡಿಕೊಂಡ ಹಣ ಒಂದು ಲಕ್ಷ ಕೋಟಿಗೂ ಹೆಚ್ಚು. ಆದರೆ, ಈ ಹಣ ಎಲ್ಲಿ ಹೋಗುತ್ತೆ, ಏನಾಗುತ್ತೆ ಎಂಬ ಸಹಜ ಕುತೂಹಲ ಹಲವರಲ್ಲಿ ಇದೆ. ಹಲವು ಪ್ರಕರಣಗಳಲ್ಲಿ ಇಡಿ ಅಧಿಕಾರಿಗಳು ಜಪ್ತಿ ಮಾಡಿದ ಹಣವನ್ನು ಇಂಗ್ಲೀಷ್‌ನ ಇ ಮತ್ತು ಡಿ ಆಕಾರದಲ್ಲಿ ನೋಟಿನ ಕಂತೆಗಳನ್ನು ಜೋಡಿಸುವುದನ್ನು ಕಂಡಿರಬಹುದು.
ಇಡಿ, ಸಿಬಿಐ, ಐಟಿ ಇತ್ಯಾದಿ ಕೇಂದ್ರೀಯ ತನಿಖಾ ಸಂಸ್ಥೆಗಳು ವಿವಿಧ ಆರ್ಥಿಕ ಅಪರಾಧಗಳ ಪ್ರಕರಣಗಳಲ್ಲಿ ರೇಡ್ ಮಾಡಿ ಚರ ಮತ್ತು ಅಚರ ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರ ಹೊಂದಿರುತ್ತವೆ.
ಒಂದು ರೇಡ್‌ನಲ್ಲಿ ಜಫ್ತಿಯಾದ ಹಣವನ್ನು ಲೆಕ್ಕ ಹಾಕಲಾಗುತ್ತದೆ. ಎಷ್ಟು ಆಸ್ತಿ ಮತ್ತು ಹಣವನ್ನು ಜಫ್ತಿ ಮಾಡಲಾಗಿದೆ ಎಂಬ ವಿವರ ಇರುವ ಪಂಚನಾಮೆ ವರದಿ ಬರೆಯಲಾಗುತ್ತದೆ. ಆರ್‌ಬಿಐ ಅಥವಾ ಎಸ್‌ಬಿಐನಂತಹ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇಡಿ ಹೊಂದಿರುವ ಬ್ಯಾಂಕ್ ಖಾತೆಗಳಿಗೆ ಈ ಜಪ್ತಿ ಹಣ ಜಮೆಯಾಗುತ್ತದೆ. ಒಂದು ವೇಳೆ ನೋಟಿನ ಕಂತೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರದ ಅಂಶಗಳು ಇದ್ದರೆ (ಉದಾಹರಣೆಗೆ ಯಾವುದಾದರೂ ಹೆಸರು ಬರೆದಿರುವುದು ಇತ್ಯಾದಿ) ಅಂಥ ನೋಟಿನ ಕಂತೆಗಳನ್ನು ಭದ್ರವಾಗಿ ಇಡಿ ಕಚೇರಿಯಲ್ಲಿ ಇಡಲಾಗುತ್ತದೆ. ಒಡವೆ ಇತ್ಯಾದಿಯನ್ನೂ ಹೀಗೆ ಕವರ್ ಅಥವಾ ಬಾಕ್ಸ್‌ಗಳಲ್ಲಿ ಹಾಕಿ ಸೀಲ್ ಮಾಡಿ ಇಡಲಾಗುತ್ತದೆ. ಕೋರ್ಟ್‌ನಲ್ಲಿ ಇವು ಸಾಕ್ಷ್ಯಗಳಾಗುತ್ತವೆ.
ಒಂದು ವೇಳೆ, ಇಡಿ ದಾಖಲಿಸಿದ ಪ್ರಕರಣ ಇತ್ಯರ್ಥವಾಗಿ ಅಪರಾಧ ಸಾಬೀತಾದರೆ, ಜಪ್ತಿ ಮಾಡಿದ ಹಣವನ್ನು ಇಡಿ ಇಲಾಖೆ ಸರಕಾರಕ್ಕೆ ವರ್ಗಾಯಿಸುತ್ತದೆ. ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಈ ವರ್ಗಾವಣೆ ಆಗುತ್ತದೆ.
ಬ್ಯಾಂಕ್ ವಂಚನೆ ಆಗಿದ್ದರೆ?
ಬ್ಯಾಂಕುಗಳಿಂದ ಕೋಟಿ ಕೋಟಿ ಹಣವನ್ನು ಸಾಲವಾಗಿ ಪಡೆದು ಹಿಂದಿರುಗಿಸದೇ ವಂಚನೆ ಎಸಗಿದ ಹಲವು ಪ್ರಕರಣಗಳಿವೆ. ಈ ಸಂದರ್ಭದಲ್ಲಿ ಪ್ರಕರಣ ಇತ್ಯರ್ಥವಾಗಿ ಅಪರಾಧ ಸಾಬೀತಾದಾಗ, ಯಾವ ಬ್ಯಾಂಕಿಂದ ಅಪರಾಧಿಗಳು ಸಾಲ ಪಡೆದು ವಂಚಿಸಿದ್ದರೋ ಆ ಬ್ಯಾಂಕಿಗೆ ಜಫ್ತಿ ಹಣವನ್ನು ಇಡಿ ತಲುಪಿಸುತ್ತದೆ.
ಆರ್ಥಿಕ ಅಪರಾಧಿಗಳ ಬಳಿ ಹಣ ಇಲ್ಲದಿದ್ದರೆ ಅವರ ಇತರ ಆಸ್ತಿಗಳಿದ್ದರೂ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಇವುಗಳನ್ನು ಮಾರಿ ಅದರಿಂದ ಹಣವನ್ನು ಆಯಾಯ ಬ್ಯಾಂಕುಗಳಿಗೆ ಮರಳಿಸಲಾಗುತ್ತದೆ. ಇತ್ತೀಚೆಗೆ ಇಡಿ ಇಲಾಖೆ ಸುಮಾರು 8,441 ಕೋಟಿ ರೂ ಹಣವನ್ನು ಬ್ಯಾಂಕುಗಳಿಗೆ ಮರಳಿಸಿತ್ತು. ಇದೂವರೆಗೂ 23 ಸಾವಿರ ಕೋಟಿ ರೂ ಹಣವನ್ನು ಇಡಿ ರೀಫಂಡ್ ಮಾಡಿದೆ.
ಕಾನೂನು ಏನಿದೆ?
ಪಿಎಂಎಲ್‌ಎ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯವು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ಆದರೆ, 180 ದಿನ, ಅಂದರೆ 6 ತಿಂಗಳವರೆಗೆ ಮಾತ್ರ ಈ ಆಸ್ತಿಯನ್ನು ಅದು ಇಟ್ಟುಕೊಂಡಿರಲು ಸಾಧ್ಯ. ಅಷ್ಟರೊಳಗೆ ಈ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ತನ್ನ ಕ್ರಮ ಸರಿ ಎಂದು ಕೋರ್ಟ್ ಮುಂದೆ ಇಡಿ ಸಾಬೀತುಪಡಿಸಬೇಕು. ಇಲ್ಲವಾದರೆ ಇಡಿ ಕೈಯಿಂದ ಆ ಆಸ್ತಿ ಮರಳಿ ಹೋಗುತ್ತದೆ.
ಇನ್ನೂ ಒಂದು ಅಂಶ ಎಂದರೆ, ಇಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡರೂ, ಆ ಪ್ರಕರಣ ಕೋರ್ಟ್‌ನಲ್ಲಿ ಇತ್ಯರ್ಥ ಆಗುವವರೆಗೂ ಆರೋಪಿಯು ಆಸ್ತಿಯನ್ನು ಅನುಭವಿಸಬಹುದಾಗಿದೆ. ಇದು ಚರ ಆಸ್ತಿಗಳಿಗೆ ಅನ್ವಯ ಆಗುತ್ತದೆ. ಉದಾಹರಣೆಗೆ, ಜಮೀನು, ಮನೆ ಇತ್ಯಾದಿ. ಆದರೆ, ಈ ಆಸ್ತಿಯನ್ನು ಆರೋಪಿ ಮಾರಲು ಆಗುವುದಿಲ್ಲ.