ನವದೆಹಲಿ: ಸಾಮಾನ್ಯವಾಗಿ ಒಂದು ಉದ್ಯೋಗ ಮೂರ್ನಾಲ್ಕು ಇ-ಮೇಲ್, ಜೊತೆಗೆ ನಾಲ್ಕೈದು ಕರೆಗಳಲ್ಲಿ ಸಿಕ್ಕಿಬಿಟ್ಟಿರುತ್ತದೆ. ಆದರೆ ಇಲ್ಲೊಬ್ಬ ಯುವಕ ಬರೋಬ್ಬರಿ 600 ಇ-ಮೇಲ್ ಹಾಗೂ 80 ಫೋನ್ ಕರೆಗಳ ಬಳಿಕ ಪಡೆದುಕೊಂಡಿದ್ದಾನೆ. ಹೀಗೆ ತನ್ನ ಕನಸಿನ ಉದ್ಯೋಗ ಪಡೆದುಕೊಂಡ ಯುವಕನ ಹೆಸರು ವತ್ಸಲ್ ನಹತಾ.
ಯಾಲೆ ಯುನಿವರ್ಸಿಟಿಯ ಪದವೀಧರನಾಗಿರುವ 23 ವರ್ಷದ ಈ ಯುವಕ ತನಗೆ ಉದ್ಯೋಗ ಸಿಕ್ಕ ಪರಿಯನ್ನು ವಿವರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಹೀಗೆ ಈತ ಉದ್ಯೋಗ ಪಡೆದುಕೊಂಡಿದ್ದೆಲ್ಲಿ ಎಂದರೆ ಅದು ವಿಶ್ವ ಬ್ಯಾಂಕ್. ಸದ್ಯ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನಲ್ಲಿ ರಿಸರ್ಚ್ ಅನಾಲಿಸ್ಟ್ ಆಗಿರುವ ಈತ ತನ್ನ ಮೊದಲ ಉದ್ಯೋಗ ಸಿಕ್ಕಿದ್ದನ್ನು ಹೇಳಿಕೊಳ್ಳುತ್ತ ಇತರ ಉದ್ಯೋಗಾಕಾಂಕ್ಷಿಗಳನ್ನು ಹುರಿದುಂಬಿಸುವ ಕೆಲಸವನ್ನೂ ಮಾಡಿದ್ದಾನೆ.
ಅದು 2020ರ ಮಾರ್ಚ್ 20ರ ಸಮಯ. ಇನ್ನು 2 ತಿಂಗಳು ಕಳೆದರೆ ಯಾಲೆ ಯುನಿವರ್ಸಿಟಿಯಲ್ಲಿ ನನ್ನ ಪದವಿ ಮುಗಿಯುವುದರಲ್ಲಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕುತ್ತಿದ್ದವು. ಪ್ರತಿ ಕಂಪನಿಯೂ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ನನಗೆ ಕೆಲಸ ಸಿಗುವ ಯಾವುದೇ ಸಾಧ್ಯತೆ ಕಾಣಿಸುತ್ತಿರಲಿಲ್ಲ. ಅದೇ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡ ವಲಸೆ ನೀತಿ ಮತ್ತಷ್ಟು ಅನಿಶ್ಚಿತತೆ ಮೂಡಿಸಿತ್ತು. ಏಕೆಂದರೆ ಎಲ್ಲ ಕಂಪನಿಗಳವರೂ ಸುರಕ್ಷತೆಯ ನಿಟ್ಟಿನಲ್ಲಿ ಯುಎಸ್ ನಾಗರಿಕರನ್ನೇ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿದ್ದವು. ಯಾಲೆಗೆ ಬಂದೂ ನಾನು ಒಂದು ಸುಭದ್ರ ಉದ್ಯೋಗ ಗಿಟ್ಟಿಸಿಕೊಳ್ಳಲಾಗದಿದ್ದರೆ ಏನು ಪ್ರಯೋಜನ? ಹೇಗಿದ್ದಿಯಾ ಎಂದು ಕೇಳುತ್ತಿದ್ದ ಪಾಲಕರಿಗೆ ಗಟ್ಟಿಯಾಗಿ ಏನೂ ಹೇಳಲು ಆಗದ ಪರಿಸ್ಥಿತಿ ಇತ್ತು. ಭಾರತಕ್ಕೆ ಮರಳುವುದು ನನ್ನ ಆಯ್ಕೆ ಅಲ್ಲ, ಆದರೆ ನನ್ನ ಮೊದಲ ಸಂಬಳದ ಚೆಕ್ ಡಾಲರ್ನಲ್ಲೇ ಇರಬೇಕು ಎಂದು ನಿರ್ಧರಿಸಿದೆ ಎನ್ನುತ್ತ ಉದ್ಯೋಗ ಪಡೆಯಲು ತಾನು ನಡೆಸಿದ್ದ ಪ್ರಯತ್ನವನ್ನು ವತ್ಸಲ್ ಲಿಂಕ್ಡ್ಇನ್ನಲ್ಲಿ ಹೇಳಿಕೊಂಡಿದ್ದಾನೆ.
ನೆಟ್ವರ್ಕಿಂಗ್ ಮೊರೆ ಹೋದ ತಾನು ಆ ಎರಡು ತಿಂಗಳಲ್ಲಿ 1,500 ಕನೆಕ್ಷನ್ ರಿಕ್ವೆಸ್ಟ್ ಕಳಿಸಿದ್ದೆ. 600 ಇ-ಮೇಲ್ಸ್ ರವಾನಿಸಿದ್ದೆ. ಮಾತ್ರವಲ್ಲ, ವಿವಿಧ ಥರ ಜನರಿಗೆ ಸುಮಾರು 80 ಕರೆಗಳನ್ನು ಮಾಡಿದ್ದೆ. ಅಷ್ಟಾಗಿಯೂ ಬಹಳಷ್ಟು ಕಡೆ ತಿರಸ್ಕೃತಗೊಂಡಿದ್ದೆ. ಆದರೆ ಅವೆಲ್ಲವನ್ನೂ ಲೆಕ್ಕಿಸದೆ ನಾನು ಪ್ರಯತ್ನ ಮುಂದುವರಿಸಿದೆ. ಎಷ್ಟರಮಟ್ಟಿಗೆ ಕನಸಲ್ಲೂ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದೆ. ಕೊನೆಗೂ ನನ್ನ ಪ್ರಯತ್ನದಲ್ಲಿ ಯಶಸ್ವಿಯಾದೆ, ಅಂತಿಮವಾಗಿ ಆ ಮೇನಲ್ಲಿ ನಾಲ್ಕು ಕಡೆ ಉದ್ಯೋಗಕ್ಕೆ ಅವಕಾಶ ಸಿಕ್ಕಿತು. ಅದರಲ್ಲಿ ವಿಶ್ವ ಬ್ಯಾಂಕ್ ಉದ್ಯೋಗ ಆಯ್ಕೆ ಮಾಡಿಕೊಂಡೆ. ಅವರು ನನಗೆ ವಿಸಾ ಸ್ಪಾನ್ಸರ್ ಕೂಡ ಮಾಡುವುದಾಗಿ ಹೇಳಿದರು ಎಂದೆಲ್ಲ ಹೇಳಿಕೊಂಡಿರುವ ವತ್ಸಲ್ ಇದರಿಂದ ತಾನು ಕಲಿತಿದ್ದನ್ನು ಕೂಡ ಬರೆದುಕೊಂಡಿದ್ದಾರೆ.
ನನ್ನ ಈ ಇಡೀ ಪ್ರಯಾಣ ನನಗೆ ನೆಟ್ವರ್ಕಿಂಗ್ನ ಶಕ್ತಿಯನ್ನು ಪರಿಚಯಿಸಿತು, ಅದು ನನ್ನ ಎರಡನೇ ಸ್ವಭಾವವೇ ಆಯಿತು. ನಾನು ಯಾವುದೇ ಪರಿಸ್ಥಿತಿಯಲ್ಲೂ ಬದುಕಬಲ್ಲೆ ಎಂಬ ವಿಶ್ವಾಸ ಮೂಡಿಸಿತು. ನನ್ನ ಈ ಪದವಿ ಇಲ್ಲಿಯವರೆಗೆ ಕರೆದುಕೊಂಡು ಬಂತು ಎಂದು ಹೇಳಿಕೊಂಡಿರುವ ಈತ ಸಂಕಷ್ಟದ ಪರಿಸ್ಥಿತಿಯೇ ನಮ್ಮ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಹೊಸ ವ್ಯಕ್ತಿಯಾಗಿ ಹೊರಹೊಮ್ಮುವ ಅವಕಾಶಗಳು ಎಂದಿದ್ದಾನೆ. ನೀವೂ ನನ್ನಂಥದ್ದೇ ಪರಿಸ್ಥಿತಿಯಲ್ಲಿದ್ದರೆ, ಆಕಾಶವೇ ತಲೆ ಮೇಲೆ ಬಿದ್ದಿದೆ ಎಂಬಂಥ ಮನೋಭಾವದಲ್ಲಿದ್ದರೂ ತಲೆ ಕೆಡಿಸಿಕೊಳ್ಳಬೇಡಿ, ಪ್ರಯತ್ನ ಮುಂದುವರಿಸಿ, ಬಾಗಿಲು ತಟ್ಟುವುದನ್ನು ನಿಲ್ಲಿಸಬೇಡಿ ಎಂದೂ ಕಿವಿಮಾತು ಹೇಳಿದ್ದಾನೆ.