ಅಹಮದಾಬಾದ್: ಗುಜರಾತ್‌ನ ಕರಾವಳಿ ಬಳಿ ಜಂಟಿ ಕಾರ್ಯಾಚರಣೆ ನಡೆಸಿದ ಗುಜರಾತ್ ಭಯೋತ್ಪಾದನೆ ನಿಗ್ರಹ ಪಡೆ ಮತ್ತು ಭಾರತೀಯ ಕರಾವಳಿ ಪಡೆಗಳು ಪಾಕಿಸ್ತಾನದ ಮೀನುಗಾರ ದೋಣಿಯೊಂದರಿಂದ ₹200 ಕೋಟಿ ಮೌಲ್ಯದ 40 ಕೆ.ಜಿ. ಹೆರಾಯಿನ್ ವಶಕ್ಕೆ ಪಡೆದುಕೊಂಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಖಚಿತ ಮಾಹಿತಿ ಮೇರೆಗೆ ನಾವು ಕಾರ್ಯಾಚರಣೆ ಆರಂಭಿಸಿದೆವು. ಪಾಕಿಸ್ತಾನದಿಂದ ಹೊರಟಿದ್ದ ದೋಣಿಯನ್ನು ಕಛ್ ಜಿಲ್ಲೆಯ ಜಖೌ ಬಂದರಿನ ಬಳಿ ಮಧ್ಯಸಮುದ್ರದಲ್ಲಿ ತಡೆಹಿಡಿದೆವು. ದೋಣಿಯಲ್ಲಿದ್ದ ಪಾಕಿಸ್ತಾನದ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಗುಜರಾತ್‌ನ ಕರಾವಳಿಯಲ್ಲಿ ದಾಸ್ತಾನು ಇಳಿಸಿಕೊಂಡ ಬಳಿಕ ಅದನ್ನು ರಸ್ತೆ ಮೂಲಕ ಪಂಜಾಬ್‌ಗೆ ಸಾಗಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದರು' ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸಿ ಮಾದಕ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.