ಪೆರ್ಲ: ಸಾಮರಸ್ಯ ಹಾಗೂ ಏಕತೆಯ ಸಂಕೇತ ಸಾರುವ ಓಣಂ ಹಬ್ಬ ನಾಡಿನಲ್ಲಿ ಜಾತಿಮತ ಬೇಧವಿಲ್ಲದೆ ಜನರನ್ನು ಒಗ್ಗೂಡಿಸಲು ವೇದಿಕೆ ಒದಗಿಸಿಕೊಟ್ಟಿರುವುದಾಗಿ ಉದುಮ ಶಾಸಕ ಸಿ.ಎಚ್ ಕುಞಂಬು ತಿಳಿಸಿದ್ದಾರೆ.
ಅವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಬುಧವಾರ ನೇತಾಜಿ ಫ್ರೆಂಡ್ಸ್ ಸರ್ಕಲ್ ಪೆರ್ಲ ಹಾಗೂ ನೇತಾಜಿ ಸಾರ್ವಜನಿಕ ಗ್ರಂಥಾಲಯ ಸಮಿತಿ ವತಿಯಿಂದ ಬುಧವಾರ ನಡೆದ 'ಓಣಂ-2022'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾಗತ ಸಮಿತಿ ಸಂಚಾಲಕ ವಿನೋದ್ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಜಿಪಂ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಪ್ರಾಂಶುಪಾಲ ಮಹಮ್ಮದಲಿ, ನಿವೃತ್ತ ಶಿಕ್ಷಕ ಲೋಕನಾಥ ಶೆಟ್ಟಿ ಕಾಟುಕುಕ್ಕೆ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ಹೈನುಗಾರಿಕೆಯಲ್ಲಿ ಉತ್ತಮ ಸಾಧನೆ ತೋರಿದ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಹಾಗೂ ಪತ್ರಕರ್ತ ಪುರುಷೋತ್ತಮ ಪೆರ್ಲ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ವಿಭಾಗದ ಹೂವಿನ ರಂಗೋಲಿ ಸ್ಪರ್ಧೆ ಅಲ್ಲದೆ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 2021-22ನೇ ಸಾಲಿನ ಎಸ್ಸೆಸೆಲ್ಸಿಯಲ್ಲಿ ಎಲ್ಲ ವಿಷಯಗಳಲ್ಲಿ ಎ-ಪ್ಲಸ್ ಪಡೆದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕ್ಲಬ್ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ, ತಳಿಪರಂಬ ಮಲರ್ವಾಡಿ ತಂಡದಿಂದ ಮಿಮಿಕ್ಸ್ ಹಾಗೂ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಿತು.