ನವದೆಹಲಿ: 2024ರ ವೇಳೆಗೆ ದೇಶದ 90 ವಿಮಾನ ನಿಲ್ದಾಣಗಳು ಇಂಗಾಲ ಮುಕ್ತವಾಗಲಿವೆ. ಮುಂದಿನ ಐದು ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 220ಕ್ಕೆ ಏರಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಹೇಳಿದ್ದಾರೆ.
ಸಿಂಧಿಯಾ ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, 'ಪ್ರಸ್ತುತ ದೇಶದಲ್ಲಿ 141 ವಿಮಾನ ನಿಲ್ದಾಣಗಳಿದ್ದು, ಕೊಚ್ಚಿ ಮತ್ತು ದೆಹಲಿ ವಿಮಾನ ನಿಲ್ದಾಣಗಳು ಇಂಗಾಲ ಮುಕ್ತವಾಗಿವೆ. ಎಂಟು ವರ್ಷಗಳಲ್ಲಿ ದೇಶದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ 74ರಿಂದ 141ಕ್ಕೆ ಏರಿಕೆಯಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆಯು 220ಕ್ಕೆ ಏರಲಿದೆ' ಎಂದು ಮಾಹಿತಿ ನೀಡಿದ್ದಾರೆ.
'ವಿಮಾನಯಾನ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಾನು ಮಾಡಿದ ಮೊದಲ ಕೆಲಸವೆಂದರೆ, ದೇಶದಲ್ಲಿರುವ ಒಟ್ಟು ವಿಮಾನ ನಿಲ್ದಾಣಗಳ ಇಂಗಾಲ ಮ್ಯಾಪಿಂಗ್ ಪ್ರೊಫೈಲ್ ತಯಾರಿಸಿದ್ದು. ದೇಶದಲ್ಲಿ ಪ್ರಸ್ತುತ ಎರಡು ವಿಮಾನ ನಿಲ್ದಾಣಗಳು ಇಂಗಾಲ ಮುಕ್ತವಾಗಿವೆ 2024ರ ವೇಳೆಗೆ ಭಾರತದಲ್ಲಿ 92-93 ವಿಮಾನ ನಿಲ್ದಾಣಗಳು ಇಂಗಾಲ ಮುಕ್ತವಾಗಲಿವೆ' ಎಂದರು.
'ನಾಗರಿಕ ವಿಮಾನಯಾನ ಕ್ಷೇತ್ರವು ಹೆಚ್ಚಿನ ಗಮನಸೆಳೆಯುವ ಉನ್ನತ ವಲಯವಾಗಿದೆ. ಇಲ್ಲಿ ಹಸಿರುಮನೆ ಪರಿಣಾಮ ಮತ್ತು ಇಂಗಾಲದ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಈ ಕ್ಷೇತ್ರದ ಕೊಡುಗೆ ತುಂಬಾ ಕಮ್ಮಿಯಾಗಿದೆ. 2030 ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಗುರಿಯನ್ನು ಸಚಿವಾಲಯವು ಹೊಂದಿದೆ.ವಾಯುಯಾನ ವಲಯದಲ್ಲೂ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯವಿದೆ' ಎಂದು ಅವರ ಪ್ರತಿಪಾದಿಸಿದರು.
'ವಿಮಾನಯಾನ ಕ್ಷೇತ್ರದಲ್ಲಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಸಮಯ ಒದಗಿಬಂದಿದೆ. ಆಟೊಮೊಬೈಲ್ ಕ್ಷೇತ್ರದಂತೇ ವಿಮಾನಯಾನ, ವಿಮಾನ ನಿಲ್ದಾಣ, ತರಬೇತಿ ಸಂಸ್ಥೆಗಳು, ಸರಕು, ಡ್ರೋಣ್ ಇತ್ಯಾದಿ ಅಭಿವೃದ್ಧಿಯ ಹಂತಗಳಲ್ಲಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಕುರಿತು ದೃಢವಾಗಿ ನಿರ್ಣಯ ಕೈಗೊಳ್ಳಲಾಗುತ್ತಿದೆ' ಎಂದೂ ಅವರು ಹೇಳಿದ್ದಾರೆ.