ನವದೆಹಲಿ: ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆಯ (ಎನ್‌ಸಿಎಪಿ) ವ್ಯಾಪ್ತಿಗೆ ಒಳಪಡುವ ನಗರಗಳಲ್ಲಿ 2024ರ ವೇಳೆಗೆ ಧೂಳಿನ ಕಣಗಳ ಸಾಂದ್ರತೆಯಲ್ಲಿ (ಪಿಎಂ) ಶೇ 20ರಿಂದ ಶೇ 30ರಷ್ಟು ತಗ್ಗಿಸುವ ಈ ಹಿಂದಿನ ಗುರಿ ಪರಿಷ್ಕರಿಸಿ, 2026ರ ವೇಳೆಗೆ ಶೇ 40ರಷ್ಟು ತಗ್ಗಿಸುವ ಹೊಸ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಪರಿಷ್ಕರಿಸಿದ ಹೊಸ ಗುರಿ ಸಾಧಿಸಲು ನಗರಗಳು ಈಗಾಗಲೇ ತಮ್ಮ ಕ್ರಿಯಾ ಯೋಜನೆಗಳನ್ನೂ ಪರಿಷ್ಕರಿಸುತ್ತಿವೆ ಎಂದು ಪರಿಸರ ಸಚಿವಾಲಯದ ಅಧಿಕಾರಿ ತಿಳಿಸಿದರು.
ಕೇಂದ್ರದ ಪರಿಸರ ಸಚಿವಾಲಯದ ಪ್ರಕಾರ, ಎನ್‌ಸಿಎಪಿ ವ್ಯಾಪ್ತಿಗೆ ಒಳಪಡುವ 131 ಒಪ್ಪಂದೇತರ ನಗರಗಳಲ್ಲಿ 95 ನಗರಗಳಲ್ಲಿ 2017ರ ಅಂಕಿಅಂಶಕ್ಕೆ ಹೋಲಿಸಿದರೆ 2021ರಲ್ಲಿ ಪಿಎಂ 10 ಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬೆಂಗಳೂರು, ಚೆನ್ನೈ, ಮದುರೈ ಮತ್ತು ನಾಶಿಕ್ ಸೇರಿ 20 ನಗರಗಳು ವಾರ್ಷಿಕ ಸರಾಸರಿ ಪಿಎಂ 10 ಸಾಂದ್ರತೆಯ ರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿವೆ.
'2024ರ ವೇಳೆಗೆ ಪಿಎಂ ಮಟ್ಟದಲ್ಲಿ ಶೇ 20ರಿಂದ ಶೇ 30ರಷ್ಟು ತಗ್ಗಿಸಬೇಕಾಗಿದೆ. ಎನ್‌ಸಿಎಪಿ ಅಡಿಯಲ್ಲಿನ ಫಲಿತಾಂಶಗಳು ಇಲ್ಲಿಯವರೆಗೆ ಉತ್ತಮವಾಗಿವೆ. 2026ರ ವೇಳೆಗೆ ಕಡಿತ ಗುರಿಯನ್ನು 40 ಪ್ರತಿಶತಕ್ಕೆ ಪರಿಸ್ಕರಿಸಲು ನಾವು ನಿರ್ಧರಿಸಿದ್ದೇವೆ' ಎಂದು ಪರಿಸರ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ 2017ರಲ್ಲಿ ಒಂದು ಘನಮೀಟರ್‌ಗೆ 241 ಮೈಕ್ರೊ ಗ್ರಾಂ ಪಿಎಂ10 ಸಾಂದ್ರತೆಯು 2021ರ ವೇಳೆಗೆ 196 ಮೈಕ್ರೊ ಗ್ರಾಂಗಳಿಗೆ ತಗ್ಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.