ನವದೆಹಲಿ:ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹದ(Gautam Adani) ಬಿಎಸ್‍ಇ(BSE) ಅಲ್ಲಿ ಲಿಸ್ಟ್ ಆಗಿರುವ ಎಲ್ಲಾ ಸ್ಟಾಕ್‍ಗಳ ಮಾರುಕಟ್ಟೆ ಮೌಲ್ಯ ರೂ. 22 ಲಕ್ಷ ಕೋಟಿಗೂ ಹೆಚ್ಚಾಗಿದ್ದು ಈ ಮೂಲಕ ಅದಾನಿ ಸಮೂಹವು ಟಾಟಾ(Tata) ಸಮೂಹವನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ಶುಕ್ರವಾರ ಬಿಎಸ್‍ಇ ಸ್ಟಾಕ್ ಮಾರ್ಕೆಟ್ ಅವಧಿ ಮುಕ್ತಾಯಗೊಂಡಾಗ ಇತ್ತೀಚೆಗೆ ಸ್ವಾಧೀನ ಪಡಿಸಿಕೊಳ್ಳಲಾದ ಅಂಬುಜಾ ಸಿಮೆಂಟ್ ಮತ್ತು ಎಸಿಸಿ ಲಿಮಿಟೆಡ್ ಸೇರಿದಂತೆ ಅದಾನಿ ಸಮೂಹದ ಒಟ್ಟು ಒಂಬತ್ತು ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ರೂ. 22 ಲಕ್ಷ ಕೋಟಿ ದಾಟಿ ಟಾಟಾ ಸಮೂಹಗಳ ಒಟ್ಟು 27 ಸಂಸ್ಥೆಗಳ ರೂ. 20 ಲಕ್ಷ ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯವನ್ನು ಮೀರಿದೆ.
ಈ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‍ನ ಒಂಬತ್ತು ಕಂಪೆನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ರೂ. 17 ಲಕ್ಷ ಕೋಟಿಗೂ ಅಧಿಕವಾಗಿದ್ದು, ಮೂರನೇ ಸ್ಥಾನದಲ್ಲಿದೆ.
ಫೋಬ್ರ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಈಗಾಗಲೇ ಗೌತಮ್ ಅದಾನಿ ಅವರು ಎಲಾನ್ ಮಸ್ಕ್ ಮತ್ತು ಲೂಯಿಸ್ ವಿಟ್ಟನ್‍ನ ಬೆರ್ನಾರ್ಡ್ ಆರ್ನಾಲ್ಟ್ ನಂತರ ಮೂರನೇ ಸ್ಥಾನದಲ್ಲಿದ್ದಾರೆ.
ಒಂದು ಹಂತದಲ್ಲಿ ಅಲ್ಪಾವಧಿಗೆ ಅದಾನಿ ಅವರ ಒಟ್ಟು ಸಂಪತ್ತು ರೂ 154.7 ಬಿಲಿಯನ್ ತಲುಪಿ ಅವರು ಲೂಯಿಸ್ ವಿಟ್ಟನ್‍ನ ಬೆರ್ನಾರ್ಡ್ ಆರ್ನಾಲ್ಟ್ ಅವರನ್ನು ಹಿಂದಿಕ್ಕಿದರಾದರೂ ನಂತರ ಮೂರನೇ ಸ್ಥಾನಕ್ಕೆ ಸರಿದಿದ್ದಾರೆ.
ಗೌತಮ್ ಅದಾನಿ ಅವರೀಗಾಗಲೇ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.