ನವದೆಹಲಿ: ಮುಂದಿನ ವಾರದಿಂದ ಸುಪ್ರೀಂ ಕೋರ್ಟ್‌ನಲ್ಲಿನ ಎಲ್ಲಾ ಸಾಂವಿಧಾನಿಕ ಪೀಠದ ವಿಚಾರಣೆಗಳನ್ನು ನೇರಪ್ರಸಾರ ಮಾಡಲಾಗುತ್ತದೆ.
ಮಂಗಳವಾರ ನಡೆದ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರ ಸಭೆಯಲ್ಲಿ, ಸೆಪ್ಟೆಂಬರ್ 27ರಿಂದ ಸಂವಿಧಾನ ಪೀಠದ ಪ್ರಕರಣಗಳ ನೇರ ಪ್ರಸಾರವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಮಂಗಳವಾರ ಸಂಜೆ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಯುಯು ಲಲಿತ್ ಅವರು ಕರೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ನೇರಪ್ರಸಾರ ವೀಕ್ಷಿಸಲು ಶೀಘ್ರದಲ್ಲೇ ಸಾಧ್ಯವಾಗಲಿದೆ. ಸಂವಿಧಾನ ಪೀಠದಲ್ಲಿ ನಡೆಯುತ್ತಿರುವ ಪ್ರಕರಣಗಳೊಂದಿಗೆ ನೇರ ಪ್ರಸಾರ ಪ್ರಾರಂಭವಾಗುತ್ತದೆ. ನಂತರ ಇತರ ಪ್ರಕರಣಗಳಿಗೂ ಆರಂಭಿಸಲಾಗುವುದು.
2018ರಲ್ಲಿ ಪ್ರಕರಣದ ನೇರ ಪ್ರಸಾರ ಇತ್ತು!
2018ರಲ್ಲಿ ಪ್ರಕರಣವೊಂದರ ವಿಚಾರಣೆಯ ನೇರ ಪ್ರಸಾರವನ್ನು ಪ್ರಾರಂಭಿಸಲು ಸುಪ್ರೀಂ
ಕೋರ್ಟ್ ಒಪ್ಪಿಕೊಂಡಿತು. ನಂತರ ನ್ಯಾಯಾಲಯದ ನೋಂದಣಿ ಸಂಬಂಧಿಸಿದ ವ್ಯವಸ್ಥೆಗಳನ್ನು
ಮಾಡಲು ಕೇಳಲಾಗಿತ್ತು. ಕೊರೋನಾ ಸಮಯದಲ್ಲಿ ಸುಪ್ರೀಂ ಕೋರ್ಟ್ ವೀಡಿಯೊ ಕಾನ್ಫರೆನ್ಸಿಂಗ್
ಮೂಲಕ ವಿಚಾರಣೆಯನ್ನು ಪ್ರಾರಂಭಿಸಿತು. ಆದರೆ ಅದನ್ನು ಸಾಮಾನ್ಯ ಜನರಿಗೆ ನೇರ ಪ್ರಸಾರ
ಮಾಡಲಿಲ್ಲ. ಇದೀಗ ನ್ಯಾಯಾಲಯದ ಆದೇಶದ 4 ವರ್ಷಗಳ ನಂತರ ಕಾಲ ಕೂಡಿಬಂದಿದೆ.
youtube ನಲ್ಲಿ ಪ್ರಸಾರ
ಆರಂಭದಲ್ಲಿ ಈ ಪ್ರಸಾರವನ್ನು YouTube ನಲ್ಲಿ ಮಾಡಲಾಗುತ್ತದೆ. ಬಳಿಕ ಸುಪ್ರೀಂ ಕೋರ್ಟ್
ಕೂಡ ಇದಕ್ಕಾಗಿ ತನ್ನ ವೆಬ್ ಸೇವೆ ಆರಂಭಿಸಲಿದೆ. ಇದಕ್ಕೂ ಮೊದಲು ಆಗಸ್ಟ್ 26ರಂದು,
ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ಬೀಳ್ಕೊಡುವ
ವಿಧ್ಯುಕ್ತ ಪೀಠದ ಕಲಾಪಗಳನ್ನು ನೇರ ಪ್ರಸಾರ ಮಾಡಿತ್ತು. ಈಗ ಪ್ರಾಯೋಗಿಕ ಆಧಾರದ ಮೇಲೆ
ಸಂವಿಧಾನ ಪೀಠದ ವಿಚಾರಣೆಯ ನೇರ ಪ್ರಸಾರವಿದೆ. ನಂತರ ಅದನ್ನು ಇತರ ಪ್ರಕರಣಗಳಿಗೂ
ವಿಸ್ತರಿಸಬಹುದು.
ಪ್ರಸ್ತುತ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು ಸಾಮಾನ್ಯ ವರ್ಗದಿಂದ ಬಡವರಿಗೆ 10 ಪ್ರತಿಶತ ಮೀಸಲಾತಿ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಇದಾದ ಬಳಿಕ ಈ ಪೀಠವು ಆಂಧ್ರಪ್ರದೇಶದಲ್ಲಿ ಹಿಂದುಳಿದ ವರ್ಗಗಳೆಂದು ಘೋಷಿಸಿ ಇಡೀ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಲಿದೆ.