ನವದೆಹಲಿ: ಇದೇ 29ರಂದು ಗುಜರಾತ್‌ಗೆ ಎರಡು ದಿನಗಳ ಕಾಲ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಗಾಂಧಿನಗರ- ಮುಂಬೈಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ ಏಕ್ಸ್‌ಪ್ರೆಸ್ ಹಾಗೂ ಅಹಮದಾಬಾದ್ ಮೆಟ್ರೊ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ₹ 29 ಸಾವಿರ ಕೋಟಿಗೆ ಹೆಚ್ಚಿನ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೆಟ್ರೊ ರೈಲು ಯೋಜನೆಗೆ ಚಾಲನೆ ನೀಡಿದ ನಂತರ ಮೋದಿ ಅವರು, ಕಲುಪುರ್ ನಿಲ್ದಾಣದಿಂದ ದೂರದರ್ಶನ ಕೇಂದ್ರ ನಿಲ್ದಾಣದವರೆಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಭಾವನಗರದಲ್ಲಿ ವಿಶ್ವದ ಮೊದಲ ಸಿಎನ್‌ಜಿ ಟರ್ಮಿನಲ್‌ಗೆ ಶಂಕುಸ್ಥಾಪನೆ ನೇರವೇರಿಸಲಿರುವ ಅವರು, ಗುಜರಾತ್‌ನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನೂ ಉದ್ಘಾಟಿಸಲಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆಯಲಿರುವ ನವರಾತ್ರಿ ಹಬ್ಬದ ಆಚರಣೆಯಲ್ಲೂ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಸೂರತ್‌ನಲ್ಲೇ ₹ 3,400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಅಂತೆಯೇ ಭಾವನಗರದಲ್ಲಿ ಸುಮಾರು ₹5,200 ಕೋಟಿಗೂ ಅಧಿಕ ಮೊತ್ತದ ಅನೇಕ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ.