ನವದೆಹಲಿ: ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಪಾಲು ಕೇವಲ 14.2% ಆಗಿದ್ದರೂ, ಭಾರತೀಯ ಜೈಲುಗಳಲ್ಲಿನ ಎಲ್ಲಾ ಬಂಧಿತರಿಗೆ ಹೋಲಿಸಿದರೆ 30% ಕ್ಕಿಂತ ಅಧಿಕ ಕೈದಿಗಳು ಮುಸ್ಲಿಮ್ ಸಮುದಾಯದವರೇ ಇದ್ದಾರೆ ಎಂದು ಅಂಕಿ ಅಂಶಗಳನ್ನು ಗಮನಿಸಿ TheHindu.com ವರದಿ ಮಾಡಿದೆ.
ಭಾರತೀಯ ಜೈಲುಗಳಲ್ಲಿ ನಾಲ್ಕು ವಿಧದ ಖೈದಿಗಳಿದ್ದಾರೆ. ಅಪರಾಧಿಗಳು (ಅಪರಾಧ ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿಗಳು), ವಿಚಾರಣಾಧೀನಾ ಕೈದಿಗಳು (ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವವರು), ಬಂಧಿತರು (ಕಾನೂನುಬದ್ಧವಾಗಿ ಬಂಧನದಲ್ಲಿರುವ ವ್ಯಕ್ತಿಗಳು) ಮತ್ತು ನಾಲ್ಕನೆಯ ವರ್ಗ, ಈ ಮೇಲಿನ ಮೂರು ವರ್ಗಗಳಲ್ಲಿ ಯಾವುದೇ ವರ್ಗಕ್ಕೂ ಸೇರದವರು. ಒಟ್ಟು ಕೈದಿಗಳ ಸಂಖ್ಯೆಗೆ ಹೋಲಿಸಿದರೆ ಕೊನೆಯ ವರ್ಗದವರ ಪಾಲು ಸಣ್ಣ ಪ್ರಮಾಣದ್ದು.
ಅಸ್ಸಾಂ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ 34% ಇದೆ. ಆದರೆ, ಅಪರಾಧಿಗಳಲ್ಲಿ 61% ಮತ್ತು ವಿಚಾರಣಾಧೀನ ಕೈದಿಗಳಲ್ಲಿ 49% ಮುಸ್ಲಿಮರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಬಂಧಿತರನ್ನು ಹೊಂದಿರುವ ರಾಜ್ಯಗಳಾದ ಗುಜರಾತ್, ಯು.ಪಿ, ಹರಿಯಾಣ ಮತ್ತು ಜೆ&ಕೆ ದಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಬಂಧಿತರಲ್ಲಿ ಮುಸ್ಲಿಮರ ಸಂಖ್ಯೆಯು ಗಮನಾರ್ಹವಾಗಿ ಅಸಮಾನತೆಯಿಂದ ಕೂಡಿದೆ.
ಬಂಧಿತರ ಒಟ್ಟು ಸಂಖ್ಯೆಯು ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ತಮಿಳುನಾಡು ಮತ್ತು ನಾಗಾಲ್ಯಾಂಡ್‌ನಲ್ಲಿ ತುಲನಾತ್ಮಕವಾಗಿ ಅಧಿಕವಾಗಿದೆ. ಇವುಗಳಲ್ಲಿ ಮುಸ್ಲಿಂ ಬಂಧಿತರ ಪಾಲು ಗುಜರಾತ್, ಯು.ಪಿ., ಹರಿಯಾಣ ಮತ್ತು ಜೆ&ಕೆ ದಲ್ಲಿನ ಜನಸಂಖ್ಯೆಯ ಪಾಲಿಗೆ ಗಮನಾರ್ಹವಾಗಿ ಅಸಮಾನವಾಗಿದೆ.
ಮಹಾರಾಷ್ಟ್ರವು ಬಂಧಿತರು ಮತ್ತು ವಿಚಾರಣಾಧೀನ ಕೈದಿಗಳಿಗೆ ಧರ್ಮಾಧಾರಿತ ವಿಘಟನೆಯನ್ನು ನೀಡಲಿಲ್ಲ. ಜನಸಂಖ್ಯೆಯ ವಿಭಜನೆ ಲಭ್ಯವಿಲ್ಲದ ಕಾರಣ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ವರದಿಯಲ್ಲಿ ಪರಿಗಣಿಸಲಾಗಿಲ್ಲ.