ಬೆಂಗಳೂರು: ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ಕುರಿತು ಕಂಪನಿಯ ಚೇರ್ಮನ್ ರಿಷದ್ ಪ್ರೇಮ್ಜಿ ಬುಧವಾರ ಮಾಹಿತಿ ಹೊರಗೆಡಹಿದ್ದಾರೆ.
ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಐಎಂಎ) ಹಮ್ಮಿಕೊಂಡಿದ್ದ ನ್ಯಾಷನಲ್ ಮ್ಯಾನೇಜ್ಮೆಂಟ್ ಕನ್ವೆನ್ಷನ್ನಲ್ಲಿ ಮಾತನಾಡಿದ ರಿಷದ್ ಪ್ರೇಮ್ಜಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
'ಮೂನ್ಲೈಟ್'ನಲ್ಲಿ ತೊಡಗಿದ್ದ ಆರೋಪದ ಮೇಲೆ ಈ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಕೆಲವು ಉದ್ಯೋಗಿಗಳು ನಮ್ಮ ಪ್ರತಿಸ್ಪರ್ಧಿ ಕಂಪನಿಯಲ್ಲಿ ನೇರವಾಗಿ ಕೆಲಸ ಮಾಡುತ್ತಿದ್ದುದು ಗಮನಕ್ಕೆ ಬಂದಿದೆ. ಕಳೆದ ಕೆಲವು ತಿಂಗಳಿನಿಂದ ಅಂಥ 300 ಉದ್ಯೋಗಿಗಳನ್ನು ಪತ್ತೆ ಮಾಡಲಾಗಿದ್ದು, ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ. ಒಂದು ಸಂಸ್ಥೆಯಲ್ಲಿ ನಿಯಮಿತವಾಗಿ ಕೆಲಸ ಮಾಡುತ್ತ ಇನ್ನೊಂದು ಸಂಸ್ಥೆಯಲ್ಲೂ ಕೆಲಸ ಮಾಡುವುದು ವಂಚನೆ ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಕರೊನಾ ಸಮಯದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ವರ್ಕ್ ಫ್ರಂ ಹೋಮ್ ಪದ್ಧತಿಯನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ಐಟಿ ಕ್ಷೇತ್ರದಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬಂದಿತ್ತು. ಹೀಗೆ ಒಂದು ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದುಕೊಂಡೂ ಇನ್ನೊಂದು ಕಂಪನಿಗೂ ಕೆಲಸ ಮಾಡುವುದನ್ನು 'ಮೂನ್ಲೈಟ್' ಎಂದು ಹೇಳಲಾಗುತ್ತಿದೆ.