ನವದೆಹಲಿ:ನವೆಂಬರ್ 30 ರೊಳಗಾಗಿ ಪ್ರತಿ ಜಿಲ್ಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ(mid-day meal scheme) ಸಾಮಾಜಿಕ ಆಡಿಟ್ ನಡೆಸಬೇಕೆಂದು ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ಅನ್ವಯ ಸಾಮಾಜಿಕ ಆಡಿಟ್ ಕಡ್ಡಾಯವಾಗಿದ್ದರೂ ಹಲವು ರಾಜ್ಯಗಳು ನಿಗದಿತ ಅವಧಿಯೊಳಗೆ ಅದನ್ನು ಪೂರ್ಣಗೊಳಿಸದೇ ಇರುವುದರಿಂದ ಕೇಂದ್ರ ಇದೀಗ ಗಡುವು ವಿಧಿಸಿದೆ ಎಂದು ವರದಿಯಾಗಿದೆ.
ಸಾಮಾಜಿಕ ಆಡಿಟ್ ಕೆಲಸ ಆರಂಭಿಸಲಾಗಿದೆ ಎಂದು ಹಲವು ರಾಜ್ಯಗಳು ಈಗಾಗಲೇ ಹೇಳಿದ್ದರೂ ಅಂತಿಮ ವರದಿಗಳನ್ನು ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಸಲ್ಲಿಸಿಲ್ಲ.
2021-22 ರಿಂದೀಚೆಗೆ ಸಾಮಾಜಿಕ ಆಡಿಟ್ ನಡೆಸದೇ ಇರುವ ರಾಜ್ಯಗಳಲ್ಲಿ ತೆಲಂಗಾಣ, ಹರ್ಯಾಣ, ಛತ್ತೀಸಗಢ, ಪಂಜಾಬ್, ಉತ್ತರಾಖಂಡ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಸೇರಿವೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಪುದುಚ್ಚೇರಿ, ಲಡಾಖ್ ಮತ್ತು ಲಕ್ಷದ್ವೀಪ ಯಾವತ್ತೂ ಸಾಮಾಜಿಕ ಆಡಿಟ್ ನಡೆಸಿಲ್ಲ.
ಆಡಿಟ್ ನಡೆಸಿದ ರಾಜ್ಯಗಳೂ ನಿಯಮಗಳನ್ನು ಪಾಲಿಸದ ಉದಾಹರಣೆಗಳಿವೆ. ಉದಾಹರಣೆಗೆ ಗುಜರಾತ್ ಕೇವಲ ಮೂರು ಜಿಲ್ಲೆಗಳ 60 ಶಾಲೆಗಳಲ್ಲಿ ಆಡಿಟ್ ನಡೆಸಿತ್ತು.