ಅಹಮದಾಬಾದ್: ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದಿಂದಾಗಿ ಈ ಹಿಂದೆ ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸರ್ಕಾರ ಅದನ್ನು ಸಂಪೂರ್ಣವಾಗಿ ನಿಮೂರ್ಲನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್ನಂಥ ವಿವಿಧ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ಹಲವು ಪದಕ ಗೆದ್ದಿದ್ದಾರೆ. ಈ ಹಿಂದೆಯೂ ಪದಕಗಳನ್ನು ಗೆಲುವ ಶಕ್ತಿ ದೇಶದ ಆಟಗಾರರಲ್ಲಿತ್ತು. ಆದರೆ ಕ್ರೀಡೆಯಲ್ಲಿ ವೃತ್ತಿಪರತೆಯ ಬದಲಿಗೆ ಸ್ವಜನಪಕ್ಷಪಾತ, ಭ್ರಷ್ಟಾಚಾರ ಇತ್ತು. ನಾವು ವ್ಯವಸ್ಥೆಯನ್ನು ಸ್ವಚ್ಛಗೊಳಿಸಿ ಕ್ರೀಡಾಪಟುಗಳಲ್ಲಿ ಹೊಸ ಆತ್ಮ ವಿಶ್ವಾಸ ತುಂಬಿದ್ದೇವೆ ಎಂದರು.
ಕ್ರೀಡಾ ಸಚಿವ ಅನುರಾಗ್ ಠಾಕೂರ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಬಾಯಿ ಪಟೇಲ್, ಕ್ರೀಡಾತಾರೆಯರಾದ ನೀರಜ್ ಚೋಪ್ರಾ, ಪಿವಿ ಸಿಂಧು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಗುಜರಾತ್ ಸಂಸತಿ ಅನಾವರಣಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ಕಲಾವಿದರು ನಡೆಸಿಕೊಟ್ಟರು.