ಮಂಗಳೂರು: ನವಮಂಗಳೂರು ಬಂದರು, ಎಂಆರ್‌ಪಿಎಲ್, ಮೀನುಗಾರಿಕಾ ಬಂದರು ಸಹಿತ 3,800 ಕೋಟಿ ರೂ. ವೆಚ್ಚದ ಯೋಜನೆಗಳ ಶಿಲಾನ್ಯಾಸ-ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿಸಿದರು.
- ಬಂದರಿನಲ್ಲಿ 281 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಂಟೇನರ್‌ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿನ ಬರ್ತ್ 14ರ ಯಾಂತ್ರೀಕರಣ ಉದ್ಘಾಟನೆ
- 1,829 ಕೋಟಿ ರೂ. ವೆಚ್ಚದ ಎಂಆರ್‌ಪಿಎಲ್ ಬಿಎಸ್ VI ಉನ್ನತೀಕರಣ ಯೋಜನೆ ಉದ್ಘಾಟನೆ
- 677 ಕೋಟಿ ರೂ. ವೆಚ್ಚದ ಎಂಆರ್‌ಪಿಎಲ್ ಸಮುದ್ರದ ಉಪ್ಪು ನೀರು ಶುದ್ಧೀಕರಣ ಘಟಕ ಲೋಕಾರ್ಪಣೆ
- 500 ಕೋಟಿ ರೂ. ವೆಚ್ಚದಲ್ಲಿ ಬಂದರಿನಲ್ಲಿ ನಿರ್ಮಿಸಿರುವ ಸಮಗ್ರ ಎಲ್‌ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಉದ್ಘಾಟನೆ
- 100 ಕೋಟಿ ರೂ. ವೆಚ್ಚದಲ್ಲಿ ಬಂದರಿನಲ್ಲಿ ನಿರ್ಮಿಸಲಾಗುವ ಶೇಖರಣಾ ಟ್ಯಾಂಕ್‌ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರಕ್ಕೆ ಶಿಲಾನ್ಯಾಸ
- 100 ಕೋಟಿ ರೂ. ವೆಚ್ಚದಲ್ಲಿ ಬಂದರಿನಲ್ಲಿ ನಿರ್ಮಾಣವಾಗುವ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳಿಗೆ ಶಿಲಾನ್ಯಾಸ
- 100 ಕೋಟಿ ರೂ. ವೆಚ್ಚದಲ್ಲಿ ಬಂದರಿನಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕುಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣಕ್ಕೆ ಶಿಲಾನ್ಯಾಸ
- 196 ಕೋಟಿ ರೂಪಾಯಿ ವೆಚ್ಚದಲ್ಲಿ ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಶಿಲಾನ್ಯಾಸ
ಸಮಾವೇಶ ನಡೆಯುವ ಮೈದಾನಕ್ಕೆ ಆಗಮಿಸಿದ ಪ್ರಧಾನಿ ಅವರು ವಿವಿಧ ಯೋಜನೆಗಳ 3ಡಿ ಮಾಡೆಲ್ ವೀಕ್ಷಿಸಿದರು. ಬಳಿಕ ವೇದಿಕೆಗೆ ಆಗಮಿಸಿದರು. ಬಂದರು ಸಚಿವ ಸರ್ಬಾನಂದ ಸೋನಾವಾಲ್ ಅವರು ಕೃಷ್ಣನ ಮೂರ್ತಿಯನ್ನು ಸ್ಮರಣಿಕೆ ನೀಡಿ, ಪೇಟ ತೊಡಿಸಿ, ಶಾಲು ಹೊದಿಸಿ ಗೌರವಿಸಿದರು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಮತ್ತಿತರರು ಮಲ್ಲಿಗೆ ಹಾರ, ಶಾಲು ಹಾಕಿ ಗೌರವಿಸಿದರು. ಪರಶುರಾಮ ಪುತ್ಥಳಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಜಿಲ್ಲೆಯ ಶಾಸಕರು ಇದ್ದರು.