ನವದೆಹಲಿ : ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟಕ್ಕೆ ಸ್ಪಂದಿಸಲೆಂದು ಕೇಂದ್ರ ಸರ್ಕಾರ ಜಾರಿ ಮಾಡಿದ 'ಪಿಎಂ-ಕಿಸಾನ್' ಯೋಜನೆಯಡಿ 3.97 ಲಕ್ಷ 'ಅನರ್ಹರು' ಹೆಸರು ನೋಂದಾಯಿಸಿ ಹಣ ಪಡೆದು ವಂಚಿಸಿರುವುದು ಪತ್ತೆಯಾಗಿದ್ದು, ಈ ರೀತಿ ಒಟ್ಟು ₹442 ಕೋಟಿ ಪಾವತಿಯಾಗಿದೆ.
ಯೋಜನೆಯಡಿ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ, 3,312 ಮೃತ ರೈತರ ಖಾತೆಗಳಿಗೂ ಹಣ ಪಾವತಿಯಾಗಿದೆ.
'ಅನರ್ಹ' ರೈತರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳು ಮುಂದಾ
ಗಿದ್ದಾರೆ.
ಕೇಂದ್ರ ಸರ್ಕಾರ 2019 ರಲ್ಲಿ ಪಿಎಂ- ಕಿಸಾನ್ ಯೋಜನೆಯನ್ನು ಜಾರಿ ಮಾಡಿತು. ಕೇಂದ್ರ
ಸರ್ಕಾರ ಒಬ್ಬ ರೈತರಿಗೆ ₹6,000 ನೀಡುವ ಜತೆಗೆ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಈ
ಯೋಜನೆಗೆ ಇನ್ನೂ ₹4,000 ಸೇರಿಸಿ ಒಟ್ಟು ₹10 ಸಾವಿರವನ್ನು ಪಾವತಿ ಮಾಡುತ್ತಿದೆ.
ಆದಾಯ ತೆರಿಗೆ ಪಾವತಿಸುವ ಹಿಡುವಳಿದಾರರು ಮತ್ತು ಸಾಂಸ್ಥಿಕ ಭೂ ಹಿಡುವಳಿದಾರರು ಈ ಯೋಜನೆಗೆ ಅರ್ಹರಲ್ಲ. ಆದರೆ, ಇಂತಹ ರೈತರು ಯೋಜನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
'ಈ ಯೋಜನೆಯನ್ನು ಆರಂಭಿಸಿದಾಗ ಸ್ವಯಂ ನೋಂದಣಿ ಮಾಡಿಕೊಳ್ಳಲು ರೈತರಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಆಗ ಇದರ ದುರ್ಬಳಕೆಯಾಗಿದೆ' ಎಂದು ಕೃಷಿ ಆಯುಕ್ತ ಬಿ. ಶರತ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
'ಅನರ್ಹ ರೈತರಿಂದ ಹಣವನ್ನು ಹಿಂದಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳಲು ಈಗಾಗಲೇ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ. ಹಣವನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ಬ್ಯಾಂಕ್‌ಗಳಿಗೆ ನೆರವಾಗಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದೆ ಇಂತಹ ವಂಚನೆ ನಡೆಯಲು ಸಾಧ್ಯವಾಗದಂತೆ ಸರ್ಕಾರ ಪರಿಶೀಲನಾ ಪ್ರಕ್ರಿಯೆಯನ್ನು ಬಿಗಿಗೊಳಿಸಿದೆ' ಎಂದು ಅವರು ತಿಳಿಸಿದರು.
ಯೋಜನೆಗೆ ಅನರ್ಹರು ಯಾರು?:
* ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು
* ಸಾಂಸ್ಥಿಕ ಭೂ ಹಿಡುವಳಿದಾರರು
* ತಿಂಗಳಿಗೆ ₹10,000 ಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು
* ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಸಿಎ ಮತ್ತು ಆರ್ಕಿಟೆಕ್ಟ್‌ಗಳು
* ಸರ್ಕಾರಿ ನೌಕರರು
* ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು