ಬೆಂಗಳೂರು: ಟ್ರಾಫಿಕ್ ನಲ್ಲಿ ತಮ್ಮ ಕಾರು ಸಿಲುಕಿದ್ದ ಪರಿಣಾಮ ವೈದ್ಯರೊಬ್ಬರು 3 ಕಿ.ಮೀ ಓಡಿ ಆಸ್ಪತ್ರೆ ತಲುಪಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಯೊಬ್ಬರ ಜೀವ ಉಳಿಸಿದ್ದಾರೆ.
“ವೈದ್ಯೋ ನಾರಾಯಣೋ ಹರಿಃ" ಎನ್ನುವ ಮಾತಿದೆ. ವೈದ್ಯರನ್ನು ಸಾಕ್ಷಾತ್ ಭಗವಂತನ ಸ್ವರೂಪ ಎನ್ನಲಾಗುತ್ತದೆ. ಈ ಮಾತಿಗೆ ಇಂಬು ನೀಡುವಂತೆ ನಗರದಲ್ಲಿ ವೈದ್ಯರೊಬ್ಬರು ರೋಗಿಯೊಬ್ಬರ ಜೀವ ಉಳಿಸಲು 3 ಕಿಮೀ ಓಡಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಯ ಜೀವ ಉಳಿಸಿದ್ದಾರೆ.
ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ಬೆಂಗಳೂರಿನ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ತೆರಳುತ್ತಿದ್ದರು. ಅವರು ತಮ್ಮ ಪ್ರಯಾಣದ ಕೊನೆಯ ಹಾದಿಯಲ್ಲಿದ್ದಾಗ, ಅವರ ಕಾರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿತು. ಸುಮಾರು ಹೊತ್ತು ಕಾದರೂ ಟ್ರಾಫಿಕ್ ತೆರವಾಗಲಿಲ್ಲ. ಇದರಿಂದ ರೋಗಿಯ ಶಸ್ತ್ರಚಿಕಿತ್ಸೆಗೆ ತಡವಾಗುತ್ತಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯ ಡಾ.ಗೋವಿಂದ್ ನಂದಕುಮಾರ್ ಕೊಂಚ ಕೂಡ ತಡ ಮಾಡದೇ ಕೂಡಲೇ ಕಾರಿಂದ ಇಳಿದು ಮೂರು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಓಡಿಕೊಂಡು ಹೋಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ವೈದ್ಯ ಡಾ.ಗೋವಿಂದ್ ನಂದಕುಮಾರ್ ಅವರು, ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ವೇಳೆ ಶಸ್ತ್ರಚಿಕಿತ್ಸೆಗೆ ತಡವಾಗುತ್ತಿದೆ ಎಂಬ ಆತಂಕವಿತ್ತು. ಬೇರೆ ದಾರಿಯಿಲ್ಲದೇ ನಾನು ಗೂಗಲ್ ಮ್ಯಾಪ್ ನೆರವಿನಿಂದ ಆಸ್ಪತ್ರೆಗೆ ತೆರಳಲು ಮುಂದಾದೆ. ಕಾರನ್ನು ಇಳಿದು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡುವ ಉಳಿದ ಪ್ರಯಾಣವನ್ನು ಕವರ್ ಮಾಡಲು ನಿರ್ಧರಿಸಿದೆ. ನನ್ನ ಕಾರಿನ ಚಾಲಕನಿಗೆ ಹೇಳಿ ಓಡಲು ನಿರ್ಧರಿಸಿದೆ. ನಾನು ನಿಯಮಿತವಾಗಿ ಜಿಮ್ ಮಾಡಿದ್ದರಿಂದ ನನಗೆ ಓಡುವುದು ಸುಲಭವಾಯಿತು. ನಾನು ಆಸ್ಪತ್ರೆಗೆ ಮೂರು ಕಿಮೀ ಓಡಿ, ಮತ್ತು ಶಸ್ತ್ರಚಿಕಿತ್ಸೆಯ ಸಮಯಕ್ಕೆ ತೆರಳಿದ್ದೆ ಎಂದು ಅವರು ಹೇಳಿದರು.
ಗೋವಿಂದ್ ನಂದಕುಮಾರ್ ಅವರು ಇಂತಹ ಪರಿಸ್ಥಿತಿ ಎದುರಿಸಿರುವುದು ಇದೇ ಮೊದಲೇನಲ್ಲ. ಬೆಂಗಳೂರಿನ ಇತರ ಪ್ರದೇಶಗಳಿಗೆ ನಾನು ಕೆಲವು ಬಾರಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕಾಗಿತ್ತು, ಕೆಲವೊಮ್ಮೆ ರೈಲು ಮಾರ್ಗಗಳಲ್ಲಿ ತೆರಳಿದ್ದೆ. ನಮ್ಮ ಆಸ್ಪತ್ರೆಯಲ್ಲಿ ರೋಗಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಕಷ್ಟು ಸಿಬ್ಬಂದಿ ಮತ್ತು ಮೂಲಸೌಕರ್ಯಗಳಿರುವುದರಿಂದ ನಾನು ಚಿಂತಿಸಲಿಲ್ಲ. ರೋಗಿಗಳು, ಅವರ ಕುಟುಂಬಗಳು ವೈದ್ಯರಿಗಾಗಿ ಕಾಯುತ್ತಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿರುವ ರೋಗಿಯು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ಏನು? ಆಂಬ್ಯುಲೆನ್ಸ್‌ಗೆ ಹೋಗಲು ಸಹ ಸ್ಥಳಾವಕಾಶವಿಲ್ಲ ಎಂದು ಅವರು ಟಿಎನ್‌ಎಸ್‌ಇಗೆ ತಿಳಿಸಿದರು.