ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಬದುಕುವುದೇ ಕಷ್ಟ ಎಂಬಂಥ ಸ್ಥಿತಿ ಇಂದಿನದ್ದು. ಎಷ್ಟೋ ಯುವಕರು ಜಾಲತಾಣಗಳನ್ನು ಚಟವಾಗಿಸಿಕೊಂಡರೆ, ಇನ್ನು ಕೆಲವರು ಇದರಿಂದಲೇ ದುಡ್ಡು ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಇಲ್ಲೊಬ್ಬ ಭಾರತೀಯ ಯುವಕ, ಇದೇ ಜಾಲತಾಣದಲ್ಲಿ 40 ಲಕ್ಷ ರೂಪಾಯಿ ಗೆದ್ದಿದ್ದಾನೆ!
ಅಷ್ಟಕ್ಕೂ ಈ ಯುವಕ ಮಾಡಿದ್ದೇನೆಂದರೆ, ಇನ್ಸ್ಟಾಗ್ರಾಮ್ನಲ್ಲಿ ಇರುವ ತಪ್ಪನ್ನು ಕಂಡುಹಿಡಿದದ್ದು! ಜನರು ಸುಲಭದಲ್ಲಿ ಇನ್‌ಸ್ಟಾಗ್ರಾಮ್ ಹ್ಯಾಕ್ ಮಾಡಲು ನೆರವಾಗುವಂಥ ಲೋಪ (ಬಗ್) ಕಂಡುಹಿಡಿದ ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ ಅವರಿಗೆ ಈ ಬಹುಮಾನ ದಕ್ಕಿದೆ.
ಇನ್ಸ್ಟಾಗ್ರಾಮ್ನಲ್ಲಿ ಲಾಗಿನ್ ಮತ್ತು ಪಾಸ್ವರ್ಡ್ ಇಲ್ಲದೆ ಯಾವುದೇ ಬಳಕೆದಾರರ ಖಾತೆಯಲ್ಲಿ ಥಂಬ್ನೇಲ್ಗಳನ್ನು ಬದಲಾಯಿಸುವ ಅವಕಾಶ ಇತ್ತು. ಈ ಲೋಪವನ್ನು ನೀರಜ್ ಶರ್ಮಾ ಕಂಡುಹಿಡಿದಿದ್ದಾರೆ. ದೋಷದ ಬಗ್ಗೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್ಬುಕ್ಗೆ ಮಾಹಿತಿ ನೀಡಿದರು. ಈ ಬಗ್ಗೆ ವಿಚಾರಣೆ ಮಾಡಿದಾಗ ಇದರಲ್ಲಿ ಸತ್ಯಾಂಶ ಇದೆ ಎನ್ನುವುದು ತಿಳಿದಿದೆ. ಕೋಟ್ಯಂತರ ಬಳಕೆದಾರರ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗುವ ಸಾಧ್ಯತೆಯನ್ನು ಯುವಕ ತಡೆಹಿಡಿದ ಕಾರಣದಿಂದ ಬಹುಮಾನ ನೀಡಲಾಗಿದೆ.
ಈ ಬಗ್ಗೆ ನೀರಜ್ ಮಾತನಾಡಿದ್ದು, 'ಇನ್‌ಸ್ಟಾಗ್ರಾಮ್ ಖಾತೆಯ ಬಗ್ಗೆ ಸಂದೇಹ ಬಂದಿತ್ತು. ಕಳೆದ ವರ್ಷದ ಡಿಸೆಂಬರ್ನಲ್ಲಿ ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೋಷವನ್ನು ಹುಡುಕಲು ಪ್ರಾರಂಭಿಸಿದೆ. ಸಾಕಷ್ಟು ಕಠಿಣ ಪರಿಶ್ರಮದ ನಂತರ, ಜನವರಿ 31ರ ಬೆಳಗ್ಗೆ, ಇದು ನನಗೆ ಅರ್ಥವಾಯಿತು. ಈ ತಪ್ಪಿನ ಬಗ್ಗೆ ಫೇಸ್ಬುಕ್ಗೆ ವರದಿ ಕಳುಹಿಸಿದೆ ಮತ್ತು ಮೂರು ದಿನಗಳ ನಂತರ ಅವರಿಂದ ಉತ್ತರವನ್ನು ಸ್ವೀಕರಿಸಿದೆ. ಅವರು ಮೊದಲು ನನಗೆ ಡೆಮೊ ಹಂಚಿಕೊಳ್ಳಲು ಕೇಳಿದರು, ನಂತರ ಅವರಿಗೆ ನಾನು ಹೇಳುತ್ತಿರುವುದು ಸತ್ಯ ಎಂದು ತಿಳಿಯಿತು' ಎಂದಿದ್ದಾರೆ.
ಮೊದಲಿಗೆ ಫೇಸ್‌ಬುಕ್ ಅವರಿಗೆ 45 ಸಾವಿರ ಡಾಲರ್ (ಸುಮಾರು 36 ಲಕ್ಷ ರೂ) ಬಹುಮಾನ ಘೋಷಿಸಿತ್ತು. ಆದರೆ ಬಹುಮಾನ ನೀಡಲು ವಿಳಂಬವಾದ ಕಾರಣದಿಂದ ಹೆಚ್ಚುವರಿಯಾಗಿ 4500 ಡಾಲರ್ (ಸುಮಾರು 4 ಲಕ್ಷ ರೂಪಾಯಿ) ನೀಡಿದೆ.