ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷ ಗಾದಿಗೆ ಸ್ವಾತಂತ್ರ್ಯ ನಂತರದಲ್ಲಿ ನಾಲ್ಕನೇ ಬಾರಿ ಚುನಾವಣೆ ನಿಗದಿಯಾಗಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಾದ್ರಾ ಅವರು ಅಧ್ಯಕ್ಷ ಸ್ಥಾನದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.ಹೀಗಾಗಿ 24 ವರ್ಷಗಳ ನಂತರ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೊಬ್ಬರಿಗೆ ಈ ಹುದ್ದೆಯನ್ನು ಅಲಂಕರಿಸುವ ಅವಕಾಶ ಒಲಿದಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಅವರಿಗೆ ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್ ಅವರಿಂದ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. 1950ರಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆದಿತ್ತು. ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಬೆಂಬಲಿತ ಅಭ್ಯರ್ಥಿ ಆಚಾರ್ಯ ಕೃಪಲಾನಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ನಂಬಿಕಸ್ಥರಾಗಿದ್ದ ಪುರುಷೋತ್ತಮ್ ದಾಸ್ ಟಂಡನ್ ಕಣಕ್ಕಿಳಿದಿದ್ದರು. ಆಗ ಟಂಡನ್ 1,306 ಮತಗಳನ್ನು ಪಡೆದು ಗೆದ್ದಿದ್ದರು.
ಅದಾಗಿ 47 ವರ್ಷಗಳ ನಂತರ (1997) ಎರಡನೇ ಬಾರಿ ಚುನಾವಣೆ ನಿಗದಿಯಾಗಿತ್ತು. ಆಗ ಸೀತಾರಾಂ ಕೇಸರಿ, ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಕಣದಲ್ಲಿದ್ದರು. ಕೇಸರಿ ಅವರು 6,224 ಮತಗಳನ್ನು ಪಡೆದು ವಿಜಯಿಯಾಗಿದ್ದರು.
2000ರಲ್ಲಿ ಸೋನಿಯಾ ಗಾಂಧಿ ಹಾಗೂ ಜಿತೇಂದ್ರ ಪ್ರಸಾದ ಕಣಕ್ಕಿಳಿದಿದ್ದರು. ಆಗ ಸೋನಿಯಾ 7,400ಕ್ಕೂ ಅಧಿಕ ಮತಗಳನ್ನು ಪಡೆದರೆ, ಪ್ರಸಾದ ಅವರಿಗೆ 94 ಮತಗಳಷ್ಟೇ ಲಭಿಸಿದ್ದವು.