ಹೈದರಾಬಾದ್ : ಗಣೇಶೋತ್ಸವ ಸಂದರ್ಭದಲ್ಲಿ ಪ್ರಸಾದವಾಗಿ ವಿತರಿಸುವ ಗಣೇಶ ಲಡ್ಡು ಹಲವು ಲಕ್ಷ ರೂಪಾಯಿಗಳನ್ನು ಗಳಿಸಿಕೊಟ್ಟಿದೆ. ಈ ವರ್ಷ 10-12 ಕೆಜಿ ತೂಕದ ಒಂದು ಲಡ್ಡನ್ನು ರಿಚ್ಮಂಡ್ ವಿಲ್ಲಾ ಸನ್ ಸಿಟಿ 60.8 ಲಕ್ಷ ರೂಪಾಯಿಗೆ ಖರೀದಿಸಿದೆ. ಈ ಗೇಟೆಡ್ ಕಮ್ಯುನಿಟಿ ಸಿಟಿಯ 100 ನಿವಾಸಿಗಳು ಇದಕ್ಕೆ ದೇಣಿಗೆ ನೀಡಿದ್ದಾರೆ.
ಮರಕತ ಶ್ರೀ ಲಕ್ಷ್ಮಿ ಗಣಪತಿ ಉತ್ಸವ ಪೆಂಡಾಲ್‍ನ ಲಡ್ಡು 46 ಲಕ್ಷ ರೂಪಾಯಿಗೆ ಮಾರಾಟವಾಗಿದ್ದರೆ, ಬಲಪುರ ಗಣೇಶ ಲಡ್ಡು 24.60 ಲಕ್ಷ ರೂಪಾಯಿಗೆ ಹರಾಜಾಗಿದೆ. 1994ರಲ್ಲಿ ಗಣಪತಿ ಪ್ರಸಾದ ಲಡ್ಡನ್ನು ಹರಾಜು ಮಾಡುವ ಸಂಪ್ರದಾಯ ಆರಂಭವಾಗಿದ್ದು, ಆಗ ಸ್ಥಳೀಯ ರೈತ ಕೊಲನ್ ಮೋಹನ್ ರೆಡ್ಡಿ 450 ರೂಪಾಯಿಗೆ ಲಡ್ಡು ಖರೀದಿಸಿದ್ದರು.
ಗಣೇಶ ಲಡ್ಡು ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿ ತರುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಬಲಪುರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಆರಂಭಕ್ಕೆ ಮುನ್ನ ಲಡ್ಡು ಹರಾಜು ಪ್ರಕ್ರಿಯೆ ಆರಂಭವಾಗುತ್ತದೆ.
ರಿಚ್ಮಂಡ್ ವಿಲ್ಲಾ ಸನ್ ಸಿಟಿಯ ನಿವಾಸಿ ಡಾ. ಸಾಜಿ ಡಿಸೋಜಾ ಮಾತನಾಡಿ, "ಈ ಲಡ್ಡು ಖರೀದಿಸಲು ಸುಮಾರು 100 ಮಂದಿ ನಿವಾಸಿಗಳು ಜತೆಯಾಗಿದ್ದೇವೆ. ಇದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಮತ್ತು ಸಿಖ್ ಗಳು ಇದ್ದಾರೆ. ಆದರೆ ನಾವೆಲ್ಲ ಮಾನವೀಯತೆಯಲ್ಲಿ ನಂಬಿಕೆ ಇಟ್ಟಿರುವ ಧರ್ಮಕ್ಕೆ ಸೇರಿದವರು. ನಮ್ಮನ್ನೆಲ್ಲ ಒಗ್ಗೂಡಿಸಿ ಮಾನವೀಯತೆಯನ್ನು ಸಂಭ್ರಮಿಸಲು ಗಣೇಶೋತ್ಸವ ಒಳ್ಳೆಯ ಸಂದರ್ಭ" ಎಂದು ಹೇಳಿದರು ಎಂದು ndtv.com ವರದಿ ಮಾಡಿದೆ.